ದೇವದುರ್ಗ: ತಾಲೂಕಿನ ಮಸರಕಲ್ಲ ಗ್ರಾಮದ ಮುರುಘೇಂದ್ರಸ್ವಾಮಿ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್, ವಿದ್ಯುತ್ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ.
ಮಸರಕಲ್ಲ ಗ್ರಾಮದಲ್ಲಿ 2006ರಲ್ಲಿ ಮುರುಘೇಂದ್ರಸ್ವಾಮಿ ಸರ್ಕಾರಿ ಪ.ಪೂ. ಕಾಲೇಜು ಕಲಾ ವಿಭಾಗ ಆರಂಭವಾಗಿದೆ. ಸದ್ಯ ಪ್ರಥಮ ಪಿಯುಸಿಗೆ 60, ದ್ವಿತೀಯ ಪಿಯುಸಿಗೆ 45 ಸೇರಿ 105 ವಿದ್ಯಾರ್ಥಿಗಳಿದ್ದಾರೆ.
ಹುದ್ದೆ ಖಾಲಿ: ಕಾಲೇಜಿನಲ್ಲಿ ಪ್ರಾಚಾರ್ಯ, ಇಬ್ಬರು ಉಪನ್ಯಾಸಕರು, ಪರಿಚಾರಕ ಹುದ್ದೆ ಖಾಲಿ ಇವೆ. ಪರಿಚಾರಕರು ಇಲ್ಲದ್ದರಿಂದ ವಿದ್ಯಾರ್ಥಿಗಳೇ ಕೋಣೆ ಮತ್ತು ಆವರಣದ ಸ್ವಚ್ಛತೆ ಮಾಡಬೇಕಿದೆ. ವರ್ಷಕ್ಕೆ 1500 ರೂ. ಅನುದಾನ ಬರುವುದರಿಂದ ಆಡಳಿತ ವರ್ಗವೇ ಸಣ್ಣಪುಟ್ಟ ಕೆಲಸ ಮಾಡಿಸಬೇಕಿದೆ. ರಾತ್ರಿ ಕಾವಲುಗಾರ ಇಲ್ಲದ್ದರಿಂದ ಕಾಲೇಜಿನ ಆವರಣದಲ್ಲಿ ಪುಂಡಪೋಕರಿಗಳಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಇದೆ.
ಸೌಲಭ್ಯಕ್ಕೆ ಪರದಾಟ: ಕಾಲೇಜು ಆರಂಭವಾಗಿ 13 ವರ್ಷವಾದರೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಕರ್ಯಗಳಿಲ್ಲ. ವಿದ್ಯಾರ್ಥಿನಿಯರು ಪಕ್ಕದ ಸರಕಾರಿ ಪ್ರೌಢಶಾಲೆ ಶೌಚಾಲಯ ಅವಲಂಬಿಸಿದ್ದರೆ, ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸುವಂತಾಗಿದೆ. ಇಲ್ಲಿನ ಸಮಸ್ಯೆ ಕುರಿತು ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಅರೆಬರೆ ಕೆಲಸ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ದುರಸ್ತಿ ಕಾಮಗಾರಿಯನ್ನು ಪಿಡಬ್ಲ್ಯೂಡಿ ಇಲಾಖೆಗೆ ವಹಿಸಲಾಗಿತ್ತು. ಸುಣ್ಣಬಣ್ಣ, ಶೌಚಾಲಯ ನಿರ್ಮಿಸಿ ನೀರಿನ ಸೌಲಭ್ಯ ಕಲ್ಪಿಸದೇ ಅರೆಬರೆ ಕೆಲಸ ಮಾಡಲಾಗಿದೆ. ಹೀಗಾಗಿ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಕಾಲೇಜಿಗೆ ವಿದ್ಯುತ್ ಸಂಪರ್ಕ ಇಲ್ಲ. ಕಾಲೇಜಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥ ವಿಜಯಕುಮಾರ ಆಗ್ರಹಿಸಿದ್ದಾರೆ.
ಉತ್ತಮ ಫಲಿತಾಂಶ: ಮಸರಕಲ್ಲ ಗ್ರಾಮದ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು 2014-15ರಿಂದ 2018-19ನೇ ಸಾಲಿನವರೆಗೆ ಸತತ ಐದು ವರ್ಷಗಳಿಂದ ತಾಲೂಕಿಗೆ ಉತ್ತಮ ಫಲಿತಾಂಶ ಜತೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಪನ್ಯಾಸಕರ ಗುಣಮಟ್ಟದ ಬೋಧನೆಯಿಂದಾಗಿ ದೇವದುರ್ಗ ಪಟ್ಟಣ ಸೇರಿ ಸುತ್ತಲಿನ ಹತ್ತಾರೂ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.
ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಕಲ್ಪಿಸುವಂತೆ ಗ್ರಾ.ಪಂ. ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ. ಸೌಲಭ್ಯ ಇಲ್ಲದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
•ಬಾಬು ಜಾನಿ,
ಪಾಲಕರು
ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕಾಲೇಜು ಸಮಸ್ಯೆ ಕುರಿತು ಜನಪ್ರತಿನಿದಿಗಳು ಗಮನಹರಿಸಬೇಕು.
•
ಸಿದ್ದಣ್ಣ ಪರಮೇಶ್ವರ,
ಪ್ರಭಾರಿ ಪ್ರಾಚಾರ್ಯ