ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಅಗತ್ಯ ಸಿಬ್ಬಂದಿ ಮತ್ತು ಸೌಲಭ್ಯ ಕೊರತೆಯಿಂದ ರೋಗಿಗಳು ಸಮರ್ಪಕ ಚಿಕಿತ್ಸೆ ಸಿಗದೇ ನಗರದ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ.
ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡ ಡಾ| ಭಾರತಿ ವಾರದಲ್ಲಿ ಎರಡ್ಮೂರು ದಿನ ಮಾತ್ರ ಆಸ್ಪತ್ರೆಗೆ ಬರುತ್ತಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆ ಅವಲಂಬಿಸುವಂತಾಗಿದೆ. ಕೆಲ ಸಂದರ್ಭಗಳಲ್ಲಿ ಸ್ಟಾಫ್ ನರ್ಸ್‌ಗಳೇ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಔಷಧವಿಲ್ಲ.
ಹಾವು ಕಚ್ಚಿದ ರೋಗಿಗಳಿಗೆ ಔಷಧಿ ಇದ್ದು, ಆದರೆ ಚಿಕಿತ್ಸೆ ನೀಡಲು ವೈದ್ಯರೇ ಇರುವುದಿಲ್ಲ. ರಾತ್ರಿ ವೈದ್ಯರು ಇರುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಸ್ಟಾಫ್ ನರ್ಸ್ ಪ್ರಥಮೋಪಚಾರ ಮಾಡಿ ಪಟ್ಟಣದ ಆಸ್ಪತ್ರೆಗೆ ಕಳುಹಿಸುತ್ತಾರೆ. ಗಲಗ ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರಿಲ್ಲದ್ದರಿಂದ ಗರ್ಭಿಣಿಯರು ಪಟ್ಟಣದಲ್ಲಿನ ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಕೆಲವೊಮ್ಮೆ ಸ್ಟಾಫ್ ನರ್ಸ್‌ಗಳೇ ಹೆರಿಗೆ ಮಾಡಿಸುತ್ತಿದ್ದು, ಏನಾದರೂ ಅಚಾತುರ್ಯವಾದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ. ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 35 ಹಳ್ಳಿಗಳು ಒಳಪಡುತ್ತಿವೆ. ಮುಂಡರಗಿ, ವಂದಲಿ, ಗಣೇಕಲ್, ಗಲಗ ಸೇರಿ ನಾಲ್ಕು ಕಿರಿಯ ಸಹಾಯಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಕ್ಕೆ ಒಬ್ಬರಂತೆ ಸ್ಟಾಫ್‌ನರ್ಸ್‌ಗಳಿದ್ದಾರೆ. ಆದರೆ ವೈದ್ಯರು ಸಕಾಲಕ್ಕೆ ಬಾರದ್ದರಿಂದ ಇಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ಪಡೆಯಲು ರೋಗಿಗಳು ಮುಂದಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿನ ಬೆಡ್ ಖಾಲಿ ಇವೆ. ಆಸ್ಪತ್ರೆಗಳಲ್ಲಿ ಅಸ್ವಚ್ಛತೆ ವಾತಾವರಣವಿದೆ. ಸ್ಟಾಫ್‌ನರ್ಸ್‌ಗಳು ತಮಗೆ ನೀಡಿದ ಮನೆಗಳಲ್ಲೇ ಇರುತ್ತಾರೆ. ರೋಗಿಗಳು ಬಂದಾಗ ಮಾತ್ರ ಆಸ್ಪತ್ರೆಗೆ ಬರುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯರಿಂದ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂಬಿಬಿಎಸ್ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಸರಕಲ್, ರಾಮದುರ್ಗ: ತಾಲೂಕಿನ ಮಸರಕಲ್, ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರ ಹುದ್ದೆ ಖಾಲಿ ಇವೆ. ಹುದ್ದೆ ಭರ್ತಿಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡೂ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಸುಮಾರು 50 ಹಳ್ಳಿಗಳು ಒಳಪಡುತ್ತಿವೆ. ಅದರಲ್ಲಿ ತಾಂಡಾ, ದೊಡ್ಡಿಗಳು, ಜಮೀನಿನಲ್ಲಿ ವಾಸಿಸುವ ಕುಟುಂಬಗಳು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ವೈದ್ಯರು ಎರಡ್ಮೂರು
ದಿನಕ್ಕೊಮ್ಮೆ ಬದಲಾಗುತ್ತಿದ್ದು, ಕಾಯಂ ವೈದ್ಯರಿಲ್ಲ. ಸರಿಯಾದ ಚಿಕಿತ್ಸೆ ಸಿಗದೇ ರೋಗಿಗಳು ಶೀಘ್ರ ಗುಣಮುಖರಾಗುತ್ತಿಲ್ಲ. ರಾತ್ರಿ ತುರ್ತು ಸಂದರ್ಭದಲ್ಲಿ ಸ್ಟಾಫ್ ನರ್ಸ್‌ಗಳೇ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ದೇವದುರ್ಗ ಸರ್ಕಾರಿ ಆಸ್ಪತ್ರೆ ಇಲ್ಲವೇ ರಾಯಚೂರು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಾರೆ.
ಆಂಬ್ಯುಲನ್ಸ್ ಕೊರತೆ: ಗಲಗ, ಮಸರಕಲ್, ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಂಬ್ಯುಲನ್ಸ್ ಸೌಲಭ್ಯವಿಲ್ಲ. ತುರ್ತು ಸಂದರ್ಭದಲ್ಲಿ ಈ ಆಸ್ಪತ್ರೆಗೆ ಬರುವ ರೋಗಿಗಳು ಆಂಬ್ಯುಲನ್ಸ್‌ಗಾಗಿ ಕಾಯುವಂತಾಗಿದೆ. ದೇವದುರ್ಗ ಪಟ್ಟಣದಿಂದ ಆಂಬ್ಯುಲನ್ಸ್ ಬರುವವರೆಗೂ ಕಾಯಬೇಕಿದೆ. ಈ ಕುರಿತು ತಾಲೂಕು ವೈದ್ಯಾಧಿಕಾರಿಗಳು ತಾಪಂ ಕೆಡಿಪಿ ಸಭೆಯಲ್ಲಿ ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸರ್ಕಾರ, ಜಿಲ್ಲಾಡಳಿತ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ತಜ್ಞ ವೈದ್ಯರನ್ನು ನೇಮಿಸಬೇಕು. ಸೌಲಭ್ಯ ಕಲ್ಪಿಸಬೇಕೆಂದು ಸಂಜೀವಕುಮಾರ ಆಗ್ರಹಿಸಿದ್ದಾರೆ.
ಮಸರಕಲ್, ರಾಮದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರ ಹುದ್ದೆ ಖಾಲಿ ಇದೆ. ಇರುವ ವೈದ್ಯರಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಂಬುಲನ್ಸ್ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಾ| ಬನದೇಶ್ವರ
ತಾಲೂಕು ವೈದ್ಯಾಧಿಕಾರಿ
ನಾಗರಾಜ ತೇಲ್ಕರ್