ದೇವದುರ್ಗ: ತಾಲೂಕಿನ ಕೃಷ್ಣಾ ನದಿ ದಂಡೆಯ ಬಹುದೊಡ್ಡ ಗ್ರಾಮ ಗೂಗಲ್‌ಗೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ ಸಮಗ್ರ ಅಭಿವೃದ್ಧಿ ಜತೆಗೆ ಮಾರ್ಗ ಮಧ್ಯದಲ್ಲಿ ಬರುವ ಹಳ್ಳಗಳಿಗೆ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಟ್ಟಣದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಗೂಗಲ್ ಗ್ರಾಮಕ್ಕೆ ರಾಯಚೂರು-ತಿಂಥಣಿ ರಾಜ್ಯ ಹೆದ್ದಾರಿಯಿಂದ ಮೂರು ಕಡೆ ರಸ್ತೆ ಸಂಪರ್ಕವಿದೆ. ದೇವದುರ್ಗದಿಂದ ಗೂಗಲ್ ಗ್ರಾಮದ 30 ಕಿ.ಮೀ. ಮುಖ್ಯರಸ್ತೆ ಬಹುತೇಕ ಹಾಳಾಗಿದೆ. ಮಸರಕಲ್‌ನಿಂದ ಸುಮಾರು 28 ಕಿ.ಮೀ. ರಸ್ತೆ ಇದ್ದು, ಕಿರಿದಾದ ರಸ್ತೆಯಿಂದ ಸಂಚಾರ ನರಕದಂತಿದೆ. ಸುಂಕೇಶ್ವರಹಾಳದಿಂದ ಗೂಗಲ್‌ಗೆ 22 ಕಿ.ಮೀ. ದೂರವಿದ್ದು, ಐದಾರು ಹಳ್ಳಗಳು ಬರುತ್ತವೆ. ಗೂಗಲ್‌ಗೆ ಸಂಪರ್ಕ ಕಲ್ಪಿಸುವ ಈ ಮೂರು ರಸ್ತೆಗಳು ಮರಳಿನ ಟಿಪ್ಪರ್ ಗಳ ಸಂಚಾರದಿಂದ ಹಾಳಾಗಿವೆ. ರಸ್ತೆಯಲ್ಲಿ ಗುಂಡಿ ಬಿದ್ದಿವೆ.
ಸದ್ಯ ದೇವದುರ್ಗ-ಗೂಗಲ್, ಸುಂಕೇಶ್ವರಹಾಳ- ಗೂಗಲ್ ರಸ್ತೆ ಮರು ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಹಂತದಲ್ಲಿದೆ. ರಸ್ತೆ ಅಭಿವೃದ್ಧಿ ಜತೆಗೆ ನಡುವೆ ಬರುವ ಐದಾರು ಹಳ್ಳಗಳಿಗೆ ಗುಣಮಟ್ಟದ ಸೇತುವೆ ನಿರ್ಮಿಸಬೇಕಾಗಿದೆ.
ಸದ್ಯ ರಸ್ತೆಗಳು ಹಾಳಾಗಿದ್ದರಿಂದ ಅರ್ಧಗಂಟೆ ಪ್ರಯಾಣಕ್ಕೆ ಒಂದು ಗಂಟೆ ವ್ಯಯಿಸಬೇಕಿದೆ. ಗೂಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಲೋಕೋಪಯೋಗಿ ಇಲಾಖೆ ಮೂಲಕ ಅನುದಾನ ಬಿಡುಗಡೆ ಮಾಡಿದೆ. ಜಾಲಹಳ್ಳಿಯಿಂದ ಗೂಗಲ್ ವರೆಗೆ ಅರಕೇರಾ, ಸುಂಕೇಶ್ವರಹಾಳ ಮಾರ್ಗವಾಗಿ (ಸರಪಳಿ ಮಾದರಿ) ಸುಮಾರು 71 ಕಿ.ಮೀ. ರಸ್ತೆ ಪುನರ್ ನಿರ್ಮಾಣಕ್ಕೆ 62.10 ಕೋಟಿ ರೂ. ಬಿಡುಗಡೆಯಾಗಿದೆ.
ದೇವದುರ್ಗದಿಂದ ಗೂಗಲ್‌ಗೆ ಸಂಪರ್ಕಿಸುವ 28 ಕಿ.ಮೀ. ಮುಖ್ಯ ರಸ್ತೆ ಅಭಿವೃದ್ಧಿಗೆ 35.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅರಕೇರಾ ಕ್ರಾಸ್‌ನಿಂದ ಗಳಗ ನಾರಬಂಡ ಮೂಲಕ (ಸರಪಳಿ ರಸ್ತೆ) 28 ಕಿ.ಮೀ. ರಸ್ತೆ ಪುನರ್ ನಿರ್ಮಾಣಕ್ಕೆ 12.60 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಮಸರಕಲ್‌ನಿಂದ ಗುಂಟ್ರಾಳ್ ಮೂಲಕ ಗೂಗಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಅನುದಾನ ನೀಡದಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ರಸ್ತೆ ಮಧ್ಯ ಬರುವ ಸೇತುವೆಗಳ ನಿರ್ಮಾಣದ ಬಗ್ಗೆ ಅನುದಾನದಲ್ಲಿ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಗೂಗಲ್‌ಗೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ ಅಭಿವೃದ್ಧಿ ಜತೆಗೆ ರಸ್ತೆ ಮಧ್ಯ ಸೇತುವೆಗಳ ನಿರ್ಮಾಣಕ್ಕೂ ಮುಂದಾಗಬೇಕೆಂದು ಗ್ರಾಮಸ್ಥ ಬಸವರಾಜಪ್ಪ ಆಗ್ರಹಿಸಿದ್ದಾರೆ.
ಗೂಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಸದ್ಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸುತ್ತೇವೆ. ಜಾಲಹಳ್ಳಿಯಿಂದ ಅರಕೇರಾ ಮಾರ್ಗವಾಗಿ ಸರಪಳಿ ರಸ್ತೆ, ದೇವದುರ್ಗ ಗೂಗಲ್ ರಸ್ತೆ, ಅರಕೇರಾ ಕ್ರಾಸ್‌ನಿಂದ ಗಳಗನಾರಬಂಡಿ ರಸ್ತೆ ಪುನರ್ ನಿರ್ಮಾಣಕ್ಕೆ 118 ಕೋಟಿ ರೂ. ಬಿಡುಗಡೆಯಾಗಿದೆ.
.
ಬಿ.ಬಿ.ಪಾಟೀಲ,
ಲೋಕೋಪಯೋಗಿ ಎಇಇ, ದೇವದುರ್ಗ