Advertisement

22 ಆರ್‌ಒ ಪ್ಲಾಂಟ್ ಬಂದ್‌

01:11 PM Mar 07, 2020 | Naveen |

ದೇವದುರ್ಗ: ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ಒದಗಿಸಲು ತಾಲೂಕಿನಾದ್ಯಂತ 100 ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಇಲ್ಲದೇ ಕೆಲವೆಡೆ ಬಂದ್‌ ಆಗಿದ್ದು, ಗ್ರಾಮಸ್ಥರು ಕೊಳವೆಬಾವಿ, ಕೆರೆ ಇಲ್ಲವೇ ಕಾಲುವೆ ನೀರನ್ನು ಸೇವಿಸುವಂತಾಗಿದೆ.

Advertisement

ಅಧಿಕಾರಿಗಳ ಮಾಹಿತಿ ಪ್ರಕಾರ 100 ಘಟಕಗಳಲ್ಲಿ 22 ಘಟಕ ದುರಸ್ತಿಗೀಡಾಗಿವೆ. 50 ಘಟಕಗಳ ನಿರ್ವಹಣೆಯನ್ನು ಆರ್‌ಪಿಇ ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಇದರಲ್ಲೂ ನಿರ್ವಹಣೆ ಕೊರತೆಯಿಂದ ಕೆಲವು ಬಂದ್‌ ಆಗಿವೆ ಎನ್ನಲಾಗಿದೆ.

20ಕ್ಕೂ ಹೆಚ್ಚು ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ಶುದ್ಧ ನೀರು ಘಟಕ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗೆ ವಾರ್ಷಿಕ 3 ಸಾವಿರ ರೂ. ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಗೆ ವಹಿಸಿದ ಘಟಕಗಳನ್ನು ಖಾಸಗಿ ಏಜೆನ್ಸಿಗೆ ನಿರ್ವಹಣೆಗೆ ನೀಡಲು ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದರೂ ಯಾರೊಬ್ಬರು ನಿರ್ವಹಣೆಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ನಿರ್ವಹಣೆ ವಹಿಸಲಾಗಿದೆ.

ಗ್ರಾಮಗಳಲ್ಲಿ 5 ರೂಪಾಯಿಗೆ ಒಂದು ಕೊಡ ಶುದ್ಧ ನೀರು ಒದಗಿಸಲಾಗುತ್ತಿದೆ. ಇನ್ನು ತೀವ್ರತರ ಆರ್ಸೆನಿಕ್‌, ಫ್ಲೋರೈಡ್‌ ಅಂಶವಿರುವ ಪಲಕನಮರಡಿ, ವಂದಲಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಶುದ್ಧ ನೀರು ಘಟಕ ಸ್ಥಾಪಿಸಿದ್ದು, ಸಿಬ್ಬಂದಿ ನೇಮಕ ಮಾಡಿ ಗ್ರಾಮಸ್ಥರಿಗೆ ಉಚಿತವಾಗಿ ಶುದ್ಧ ನೀರು ಒದಗಿಸಲಾಗುತ್ತಿದೆ. ಇನ್ನು ಬಹುತೇಕ ಗ್ರಾಮಗಳಲ್ಲಿ ಗ್ರಾಮೀಣ ಜನರಿಗೆ ಅನಾನುಕೂಲಕರ ಸ್ಥಳದಲ್ಲಿ ಘಟಕ ಸ್ಥಾಪಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಎಲ್ಲೆಲ್ಲಿ ನಿರುಪಯುಕ್ತ?
ತಾಲೂಕಿನ ನಿಲವಂಜಿ, ಗಣಜಿಲಿ, ಊಟಿ, ವಂದಲಿ, ಪಲಕನಮರಡಿ, ಕ್ಯಾದಿಗೇರಾ, ತುಗ್ಲೇರದೊಡ್ಡಿ, ಎಚ್‌.ಎನ್‌.ತಾಂಡಾ ಸೇರಿ ಇತರೆ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ನಿರ್ವಹಣೆ ಮತ್ತು ತಾಂತ್ರಿಕ ಸಮಸ್ಯೆಯಿಂದ 22 ಘಟಕಗಳು ನಿರುಪಯುಕ್ತವಾಗಿವೆ. ಹೀಗಾಗಿ ಈ ಗ್ರಾಮಗಳ ಜನತೆ ಕೊಳವೆಬಾವಿ ನೀರು ಸೇವಿಸುವಂತಾಗಿದೆ. ನಿರುಪಯುಕ್ತ ಘಟಕಗಳನ್ನು ದುರಸ್ತಿ ಮಾಡಿ ಆರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ಫ್ಲೋರೈಡ್‌ ಅಂಶವಿರುವ ನೀರು ಸೇವನೆ
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಕೊಳವೆಬಾವಿಗಳ ಆರ್ಸೆನಿಕ್‌, ಫ್ಲೋರೈಡ್‌ ಅಂಶವಿರುವ ನೀರನ್ನೇ ಗ್ರಾಮಸ್ಥರು ಸೇವಿಸಬೇಕಿತ್ತು. ಇದರಿಂದ ಗ್ರಾಮಸ್ಥರು ಕೀಲು ನೋವು ಇತರೆ ಸಮಸ್ಯೆ ಎದುರಿಸುವಂತಾಗಿತ್ತು. ಆಗಿನ ಸಚಿವ ಎಚ್‌.ಕೆ.ಪಾಟೀಲ ತಮ್ಮ ಅವಧಿಯಲ್ಲಿ ವಂದಲಿ, ಪಲಕನಮರಡಿ, ಸುಣ್ಣದಕಲ್‌, ಊಟಿ, ಮಂಡಲಗುಡ್ಡ ಸೇರಿ ಇತರೆ ಗ್ರಾಮಗಳಲ್ಲಿ ಶುದ್ಧ, ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಚಾಲನೆ ನೀಡಿದ್ದರು. ಆರಂಭದಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ದಿನ ಕಳೆದಂತೆ ಈ ಘಟಕಗಳು ನಿರ್ವಹಣೆ ಕೊರತೆಯಿಂದಾಗಿ ಬಂದ್‌ ಆಗಿವೆ. ಬೇಸಿಗೆ ಆರಂಭವಾಗಿದ್ದು, ಇಲ್ಲಿನ ಗ್ರಾಮಸ್ಥರು ಮೂರು ತಿಂಗಳ ಕಾಲ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಖಾಸಗಿ ಏಜೆನ್ಸಿಯಿಂದ ಸಮರ್ಪಕವಾಗಿ ಶುದ್ಧ ನೀರು ಘಟಕ ನಿರ್ವಹಣೆ ಆಗುತ್ತಿದೆ. ಗ್ರಾಮ ಪಂಚಾಯಿತಿಗೆ ವಹಿಸಿದ ಘಟಕಗಳಿಗೆ ಜಿಲ್ಲಾ ಪಂಚಾಯತಿಯಿಂದ ವರ್ಷಕ್ಕೆ ಮೂರು ಸಾವಿರ ರೂ. ಅನುದಾನ ನೀಡಲಾಗುತ್ತಿದೆ. ದುರಸ್ತಿಗೀಡಾದ ಘಟಕಗಳನ್ನು ಪುನಾರಂಭಿಸಲು ಕ್ರಮ ವಹಿಸಲಾಗುವುದು.
ವೆಂಕಟೇಶ ಗಲಗ,
ತಾಪಂ ಪ್ರಭಾರಿ ಅಧಿಕಾರಿ

ಹೆಚ್ಚು ಹಣ ವಸೂಲಿ
ತಾಲೂಕಿನಾದ್ಯಂತ 50 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊಣೆಯನ್ನು ಆರ್‌ಪಿಇ ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಸರ್ಕಾರದ ನಿಯಮದಂತೆ ಒಂದು ಕೊಡಕ್ಕೆ 3 ರೂ. ವಸೂಲಿ ಮಾಡಬೇಕು. ಆದರೆ ಒಂದು ಕೊಡಕ್ಕೆ 5 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಖಾಸಗಿ ಏಜೆನ್ಸಿ ವಿರುದ್ಧ, ದೂರು ನೀಡಿದ್ದಾರೆ. ಅಧಿಕಾರಿಗಳು 3 ರೂ. ಪಡೆಯುವಂತೆ ತಾಕೀತು ಮಾಡಿದ್ದರೂ ಖಾಸಗಿ ಏಜೆನ್ಸಿಯವರು ಕೇಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next