Advertisement

ಮಳೆಗಾಗಿ ವೀರಗೋಟದಲ್ಲಿ ಪರ್ಜನ್ಯ ವರುಣ ಮಹಾಯಾಗ

03:22 PM Jul 26, 2019 | Naveen |

ದೇವದುರ್ಗ: ಸಮೃದ್ಧ ಮಳೆ-ಬೆಳೆ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ತಾಲೂಕಿನ ಸುಕ್ಷೇತ್ರ ವೀರಗೋಟದ ಆದಿಮೌನಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರದಿಂದ ಪರ್ಜನ್ಯ ವರುಣ ಮಹಾಯಾಗ, ಇತರೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಐದು ದಿನಗಳವರೆಗೆ ನಡೆಯಲಿವೆ.

Advertisement

ವೀರಗೋಟದ ಅಡವಿಲಿಂಗ ಮಹಾರಾಜರು ಸೇರಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಬಳ್ಳಾರಿ-ಆಂಧ್ರಪ್ರದೇಶದ 65 ಜನ ಪುರೋಹಿತರ ನೇತೃತ್ವದಲ್ಲಿ ದಂಪತಿಗಳಿಂದ ಪರ್ಜನ್ಯ ವರುಣ ಮಹಾಯಾಗಕ್ಕೆ ಮಂತ್ರ ಘೋಷಣೆಯೊಂದಿಗೆ ಚಾಲನೆ ನೀಡಲಾಯಿತು.

ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಪರ್ಜನ್ಯ ವರುಣ ಮಹಾಯಾಗಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಎರಡನೇ ದಿನ ಗುರುವಾರವೂ ಯಾಗ ನಡೆಯಿತು. 108 ಅಗ್ನಿ ಕುಂಡಗಳನ್ನು ಸಿದ್ಧಪಡಿಸಲಾಗಿತ್ತು. ಪ್ರತಿ ಕುಂಡದಲ್ಲಿ ನಾಲ್ಕು ಜೋಡಿ ದಂಪತಿಗಳು ಪುರೋಹಿತರ ನೇತೃತ್ವದಲ್ಲಿ ಹೋಮ ನೆರವೇರಿಸಿದರು. ಒಟ್ಟು 432 ಜೋಡಿ ದಂಪತಿ ಸತತ ಎರಡು ಗಂಟೆಗಳ ಕಾಲ ಹೋಮ ಕೈಗೊಂಡರು. ಬಳ್ಳಾರಿಯ 40 ಹಾಗೂ ಆಂಧ್ರದ 25 ಸೇರಿ ಒಟ್ಟು 65 ಜನ ಪುರೋಹಿತರು ಮಂತ್ರಘೋಷ ಮೊಳಗಿಸಿದರು. ಹತ್ತಾರು ಮಠದ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಐದು ದಿನಗಳ ಕಾಲ ನಡೆಯುವ ಹೋಮದಲ್ಲಿ ನಿತ್ಯ 432 ಜೋಡಿ ದಂಪತಿಗಳು ಪಾಲ್ಗೊಂಡು ಪೂಜೆ ನೆರವೇರಿಸಲಿದ್ದಾರೆ.

ಮಹಾಯಾಗದಲ್ಲಿ ಭಾಗವಹಿಸಿದ ದಂಪತಿಗಳಿಗೆ ಶ್ರೀ ಅಡವಿಲಿಂಗ ಮಹಾರಾಜರು ಸಸಿಗಳನ್ನು ವಿತರಿಸಿದರು. 5 ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿ ವಿತರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಮುನ್ನಾ ದಿನ ದೇವಸ್ಥಾನ ಆವರಣದಲ್ಲಿ 8 ಸಾವಿರ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಜಂಬಗಿಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಸಗರ ಒಕ್ಕಲಿಗರ ಮಠದ ಶ್ರೀ ಮರಿಮಹಾಂತ ಶಿವಾಚಾರ್ಯ ಸ್ವಾಮೀಜಿ, ಲಕ್ಷಾಂಪುರದ ಶ್ರೀ ಬಸವಲಿಂಗ ದೇವರು, ಮರು ಹುಚ್ಚೇಶ್ವರ ಸ್ವಾಮೀಜಿ, ನಿಲೋಗಲ್ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನವಲಕಲ್ ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next