ದೇವದುರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗುವುದರಿಂದ ರಾಜ್ಯ ಸರಕಾರ ಸರ್ಕಾರಿ ಕಚೇರಿ ಸಮಯ ಬದಲಾವಣೆ ಮಾಡಿದೆ. ಬೆಳಗ್ಗೆ 8:30ರಿಂದ ಮಧ್ಯಾಹ್ನ 1:30ವರೆಗೆ ಕಚೇರಿ ಸಮಯ ನಿಗದಿಪಡಿಸಿ ಆದೇಶಿಸಿದೆ. ಆದರೆ ಇಲ್ಲಿನ ಕೆಲ ಇಲಾಖೆ ಅಧಿಕಾರಿಗಳು ಎಂದಿನಂತೆ 11:00ರ ಸುಮಾರಿಗೆ ಬರುತ್ತಿದ್ದಾರೆ. ಇದರಿಂದ ಬೆಳಗ್ಗೆ ವಿವಿಧ ಕೆಲಸ, ಕಾರ್ಯಕ್ಕೆ ಬರುವ ಸಾರ್ವಜನಿಕರು ಅಧಿಕಾರಿಗಳಿಗಾಗಿ ಕಾಯುವಂತಾಗಿದೆ.
ಕೃಷಿ ಇಲಾಖೆ, ಪುರಸಭೆ, ತೋಟಗಾರಿಕೆ, ಉಪನೋಂದಣಿ, ತಾಲೂಕು ಪಂಚಾಯಿತಿ, ಪಿಡಬ್ಲ್ಯೂಡಿ, ಅರಣ್ಯ, ಸಮಾಜ ಕಲ್ಯಾಣ ಇಲಾಖೆ, ಸರ್ವೇ ಆಫೀಸ್, ಸಿಡಿಪಿಒ ಸೇರಿ ಇತರೆ ಇಲಾಖೆ ಅಧಿಕಾರಿಗಳು ಸರ್ಕಾರ ನಿಗದಿಪಡಿಸಿದ ಸಮಯ ಪಾಲನೆ ಮಾಡುತ್ತಿಲ್ಲ. ಅವರು ಬಂದದ್ದೇ ಸಮಯ ಎಂಬಂತಾಗಿದೆ. ಹೀಗಾಗಿ ಅಧಿಕಾರಿಗಳ ವರ್ತನೆ ವಿರುದ್ಧ ಕೆಲ ಸಂಘಟನೆ ಮುಖಂಡರು ತಹಶೀಲ್ದಾರ್‌ಗೆ ಮೌಖೀಕವಾಗಿ ದೂರು ಸಲ್ಲಿಸಿದ್ದಾರೆ.
ಉಪ ನೋಂದಣಿ ಅಧಿಕಾರಿ 11:00ಕ್ಕೆ ಕಚೇರಿಗೆ ಬರುವುದರಿಂದ ಬಹುತೇಕರು ಕಚೇರಿ ಎದುರು ಕಾಯುವ ದೃಶ್ಯ ಸಾಮಾನ್ಯವಾಗಿದೆ. ಕೃಷಿ ಇಲಾಖೆ ಪ್ರಭಾರಿ ಅಧಿಕಾರಿ ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಹೆಚ್ಚಾಗಿ ಇರುವುದರಿಂದ ಇಲ್ಲಿನ ಸಿಬ್ಬಂದಿ ಕಚೇರಿ ಸಮಯ ಪಾಲನೆ ಮಾಡುತ್ತಿಲ್ಲ. ಹೀಗಾಗಿ ರೈತರು ಕಚೇರಿಗೆ ಬಂದು ವಾಪಸ್ ಹೋಗುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜನರ ಕೈಗೆ ಸಿಗುವುದೇ ಅಪರೂಪವಾಗಿದೆ. ಹೀಗಾಗಿ ಗ್ರಾಮೀಣ ಜನ ತಾಲೂಕು ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಲು ಪಟ್ಟಣಕ್ಕೆ ಬಂದರೆ ಇಲ್ಲಿಯೊ ಅದೇ ಸಮಸ್ಯೆ. 11:00ರ ಸುಮಾರಿಗೆ ಬರುವ ಅಧಿಕಾರಿಗಳು ಮಧ್ಯಾಹ್ನ 1:30ಕ್ಕೆ ಹೋಗಿ ಬಿಡುತ್ತಾರೆ. ನಮ್ಮ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಶಿವಪ್ಪ, ಆಂಜನೇಯ ದೂರಿದರು.
ಸರ್ಕಾರ ನಿಗದಿಪಡಿಸಿದ ಸಮಯ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೈ ಕರವೇ ಅಧ್ಯಕ್ಷ ಖಾದರ್ ಪಾಷಾ ಆಗ್ರಹಿಸಿದ್ದಾರೆ.
ಕೆಲ ಅಧಿಕಾರಿಗಳು ಬೇಸಿಗೆಯಲ್ಲಿ ನಿಗದಿಪಡಿಸಿದ ಕಚೇರಿ ಸಮಯ ಪಾಲನೆ ಮಾಡದೇ ಇರುವುದು ಗಮನಕ್ಕೆ ಬಂದಿದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವೆ.
•ಮಲ್ಲಿಕಾರ್ಜುನ ಅರಕೇರಿ, ತಹಶೀಲ್ದಾರ್