Advertisement

ನೋಂದಣಾಧಿಕಾರಿ ಕಚೇರಿಗೆ ಬೀಗ

03:51 PM Dec 04, 2019 | Team Udayavani |

ದೇವದುರ್ಗ: ನೆಟ್‌ವರ್ಕ್‌ ಮತ್ತು ಗಣಕಯಂತ್ರ ದೋಷದ ನೆಪದಲ್ಲಿ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಗೆ 7 ದಿನಗಳಿಂದ ಬೀಗ ಜಡಿಯಲಾಗಿದ್ದು, ಅಧಿಕಾರಿ ಕೂಡ ಕಚೇರಿಯತ್ತ ಸುಳಿಯದ್ದರಿಂದ ಆಸ್ತಿ ಮಾರಾಟ, ಖರೀದಿ ಇತರೆ ಕೆಲಸ ಕಾರ್ಯಗಳಿಗೆ ರೈತರು, ಜನಸಾಮಾನ್ಯರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

Advertisement

ಮುಗಿದ ಟೆಂಡರ್‌ ಅವಧಿ: ರಾಜ್ಯದಲ್ಲಿರುವ ಉಪ ನೋಂದಣಿ ಕಚೇರಿಗೆ ಹಿಂದೂಸ್ತಾನ್‌ ಕಂಪ್ಯೂಟರ್‌ ಲಿಮಿಟೆಡ್‌ ಕಂಪನಿ ಕಂಪ್ಯೂಟರ್‌ ನೆಟೆವರ್ಕ್‌ ಟೆಂಡರ್‌ ಪಡೆದಿತ್ತು. ಅದರ ಅವಧಿ ನಾಲ್ಕೈದು ತಿಂಗಳ ಹಿಂದೆಯೇ ಮುಗಿದಿದೆ. ಇದೀಗ ಸರಕಾರ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಹಿಂದೇಟು ಹಾಕುತ್ತಿರುವುದರಿಂದ ಉಪ ನೋಂದಣಿ ಕಚೇರಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ.

ಇಲ್ಲಿನ ಸಮಸ್ಯೆ ಮೇಲಾಧಿಕಾರಿಗಳ ಗಮನಕ್ಕಿದೆ. ಈ ಸಮಸ್ಯೆ ರಾಜ್ಯ ಮಟ್ಟದಲ್ಲೇ ಬಗೆಹರಿಯಬೇಕಾಗಿದೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.

ಅಧಿಕಾರಿ ಗೈರು: ಉಪ ನೋಂದಣಿ ಕಚೇರಿಯಲ್ಲಿ ಗಣಕಯಂತ್ರ ನೆಟ್‌ವರ್ಕ್‌ ಸಮಸ್ಯೆ ಹಿನ್ನೆಲೆಯಲ್ಲಿ ಕಚೇರಿಗೆ ಬೀಗ ಜಡಿಯಲಾಗಿದೆ. ಇದೇ ನೆಪದಲ್ಲಿ ಉಪ ನೋಂದಣಾಧಿಕಾರಿ ಕೂಡ ಕಚೇರಿಗೆ ಬರುತ್ತಿಲ್ಲ. ನಿತ್ಯ ಕಚೇರಿಗೆ ಬರುವ ಜನರಿಗೆ ಸಮಸ್ಯೆ ಕುರಿತು ತಿಳಿಹೇಳುವ ಬದಲು ಕಚೇರಿಗೆ ಬೀಗ ಜಡಿದು, ಅಧಿಕಾರಿ ಗೈರಾಗಿರುವುದು ರೈತರ ಆಕ್ರೋಶಕ್ಕೆ ಗುರಿಯಾಗಿದೆ.

ನೂರಾರು ಅರ್ಜಿ: ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಆಧಾರ್‌, ಋಣಭಾರ ಪತ್ರಗಳು ಪಡೆಯಲು ಆಗುತ್ತಿಲ್ಲ. 100ಕ್ಕೂ ಹೆಚ್ಚು ಆಧಾರ್‌ ಪತ್ರಗಳು, 400ಕ್ಕೂ ಹೆಚ್ಚು ಋಣಭಾರ ಪತ್ರಗಳ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆ ಆಗಿವೆ. ಒಂದೆಡೆ ಬ್ಯಾಂಕಿನ ಅಧಿಕಾರಿಗಳು ವಾರದಲ್ಲಿ ದಾಖಲಾತಿ ನೀಡಲು ಗಡುವು ನೀಡುತ್ತಿದ್ದರೆ, ಇತ್ತ ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದಿರುವುದು ರೈತರಿಗೆ ಸಮಸ್ಯೆ ತಂದೊಡ್ಡಿದೆ.

Advertisement

ಆಗ್ರಹ: ಇಲ್ಲಿನ ಮಿನಿ ವಿಧಾನಸೌಧ ಒಳಗೆ ಇರುವ ಉಪ ನೋಂದಣಿ ಕಚೇರಿಯಲ್ಲಿ ಪದೇ ಪದೇ ನೆಟ್‌ವರ್ಕ್‌ ಸಮಸ್ಯೆ ಆಗುತ್ತಿದೆ. ಆಸ್ತಿ ವರ್ಗಾವಣೆ ಋಣಭಾರ, ಆಧಾರ್‌ ಪ್ರಮಾಣ ಪತ್ರಗಳು ಪಡೆಯಲು ನೂರಾರು ರೈತರು ತಿಂಗಳಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಸಮಸ್ಯೆ ಕುರಿತು ಮೇಲಾಧಿಕಾರಿಗಳು ಗಮನ ಹರಿಸದೇ ಇರುವುದು ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಕಚೇರಿಗೆ ಬಂದವರಿಗೆ ಮಾಹಿತಿ ಹೇಳಬೇಕಾದ ಉಪ ನೋಂದಣಾಧಿಕಾರಿಗಳು ಕಚೇರಿಗೆ ಬೀಗ ಜಡಿದು ಗೈರಾಗಿದ್ದಾರೆ.

ಸಮಸ್ಯೆ ಸರಿಪಡಿಸಿ ಗೈರಾದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕೆಂದು ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ದೇವದರ್ಗು ಉಪ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿದ್ದು ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸ್ವಲ್ಪ ಸಮಸ್ಯೆಯಾಗುತ್ತಿದೆ. ಮಲ್ಲಿಕಾರ್ಜುನ,
ಜಿಲ್ಲಾ ಉಪ ನೋಂದಣಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next