ದೇವದುರ್ಗ: ಹೊಸದಾಗಿ ಖರೀದಿಸಿದ ವಾಹನಗಳ ಇನ್ಸೂರೆನ್ಸ್ ಮಾಡಿಸಲು ಪುರಸಭೆಯಲ್ಲಿ ಹಣವಿಲ್ಲದ್ದರಿಂದ ಅವುಗಳು ರಸ್ತೆಗಿಳಿಯದೇ ಪುರಸಭೆ ನೈರ್ಮಲ್ಯ ಕಚೇರಿ ಆವರಣದಲ್ಲಿ ಮಳೆ ಬಿಸಿಲಿಗೆ ತುಕ್ಕು ಹಿಡಿಯುತ್ತಿವೆ.
ಜೆಸಿಬಿ-6 ಮಿನಿ ವಾಹನ: ಪುರಸಭೆ ಎಸ್‌ಎಫ್‌ಸಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಹಸಿ, ಒಣ ತ್ಯಾಜ್ಯ ವಿಲೇವಾರಿ ಮಾಡಲು ಆರು ಮಿನಿ ಕಸ ಸಂಗ್ರಹ ವಾಹನ ಖರೀದಿಸಿದೆ. ಆರೇಳು ತಿಂಗಳಾದರೂ ವಾಹನಗಳ ಇನ್ಸೂರೆನ್ಸ್ ಮಾಡಲು ಹಣವಿಲ್ಲದ್ದರಿಂದ ನೈರ್ಮಲ್ಯ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದು, ಮಳೆ-ಬಿಸಿಲಿಗೆ ತುಕ್ಕು ಹಿಡಿಯುತ್ತಿವೆ. ಇನ್ನು ಎಸ್‌ಎಫ್‌ಸಿ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಜೆಸಿಬಿ ಖರೀದಿಸಿದ್ದು, ಎರಡು ವರ್ಷವಾದರೂ ಇದರ ಇನ್ಸೂರೆನ್ಸ್ ಕೂಡ ಮಾಡಿಸಿಲ್ಲ ಎನ್ನಲಾಗಿದೆ. ಇದನ್ನೂ ನೈರ್ಮಲ್ಯ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ. ಲಕ್ಷಾಂತರ ರೂ. ವ್ಯಯಿಸಿ ಖರೀದಿಸಿದ ವಾಹನಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈಗ ನಿರುಪಯುಕ್ತವಾಗಿ ನಿಂತಿವೆ. ವಾರ್ಡ್‌ನಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಕ್ಕೆ ತಗ್ಗು ಗುಂಡಿ ಮುಚ್ಚಲು, ಜಾಲಿಗಿಡಗಳು ಸ್ವಚ್ಛತೆ ಸೇರಿ ಇತರೆ ಅಭಿವೃದ್ಧಿ ಕೆಲಸಕ್ಕೆ ಜೆಸಿಬಿ ಬಳಕೆಯಾಗುತ್ತಿಲ್ಲ.
ರಚನೆ ಆಗದ ಆಡಳಿತ ಮಂಡಳಿ: ಕಸ ವಿಲೇವಾರಿ ಆಗುತ್ತಿಲ್ಲ: ಪುರಸಭೆ ಚುನಾವಣೆ ಮುಗಿದು 10 ತಿಂಗಳಾದರೂ ಆಡಳಿತ ಮಂಡಳಿ ರಚನೆ ಆಗಿಲ್ಲ. ಹೀಗಾಗಿ ಪುರಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಆಡಿದ್ದೇ ಆಟವಾದಂತಾಗಿದೆ. ಪಟ್ಟಣದಲ್ಲಿ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಿದೆ. ತಮಗೆ ತಿಳಿದಂತೆ ನಡೆದುಕೊಳ್ಳುತ್ತಿರುವ ಪುರಸಭೆ ಸಿಬ್ಬಂದಿಗೆ ಚುರುಕು ಮುಟ್ಟಿಸಲು ಸದಸ್ಯರಿಗೆ ಅಧಿಕಾರವಿಲ್ಲದಂತಾಗಿದೆ.
ಜನರ ದೂರಿಗಿಲ್ಲ ಸ್ಪಂದನೆ: ಪುರಸಭೆಯ 23 ವಾರ್ಡ್‌ಗಳಲ್ಲಿ ಜನ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಪುರಸಭೆಗೆ ಜನತೆ ದೂರು ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿ ಆಗಾಗ ಮಿಟಿಂಗ್ ನೆಪದಲ್ಲಿ ಗೈರಾಗುವುದರಿಂದ ದೂರುಗಳ ಪಟ್ಟಿ ಬೆಳೆಯುತ್ತಿದೆ ಎಂದು ನಿವಾಸಿ ಅಹ್ಮದ್ ಪಾಷಾ ದೂರಿದ್ದಾರೆ.
ಆಗ್ರಹ: ಲಕ್ಷಾಂತರ ರೂ. ವ್ಯಯಿಸಿ ಖರೀದಿಸಿದ ವಾಹನಗಳ ವಿಮೆ ಮಾಡಿಸಿ ಬಳಕೆಗೆ ಮುಂದಾಗಬೇಕೆಂದು ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಚಲುವಾದಿ ಆಗ್ರಹಿಸಿದ್ದಾರೆ.