ದೇವದುರ್ಗ: ಪಟ್ಟಣದ ಹೊರವಲಯದ ಕ್ರೀಡಾಂಗಣದ ಪಕ್ಕದ ಗುಡ್ಡಗಾಡು ಪ್ರದೇಶಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ಕಾಲೇಜಿಗೆ ನಿತ್ಯ ಹಾವು, ಚೇಳುಗಳು ನುಗ್ಗುತ್ತಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು ಭಯದಲ್ಲೇ ಕಾಲ ಕಳೆಯುವಂತಾಗಿದೆ.
ಪಟ್ಟಣದ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಕಾಲೇಜು ಕಟ್ಟಡ ಮತ್ತು ಉಪನ್ಯಾಸಕರ ವಸತಿಗೃಹ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಲಾಗಿದೆ. ಕಟ್ಟಡಗಳ ಸುತ್ತ ಜಾಲಿಗಿಡಗಳು, ಕಸಕಡ್ಡಿಗಳು ಬೆಳೆದಿವೆ. ಕಾಲೇಜು ಸೇರಿದಂತೆ ವಸತಿಗೃಹ, ವಸತಿನಿಲಯಗಳಿಗೂ ಹಾವು, ಚೇಳು ಇತರೆ ವಿಷಜಂತುಗಳು ಬರುವುದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಸಮಸ್ಯೆಗಳ ಆಗರ:ಇನ್ನು ಕಾಲೇಜಿನಲ್ಲಿ ಹಲವು ಸಮಸ್ಯೆಗಳಿವೆ. ಆಗಾಗ ವಿದ್ಯುತ್ ಕೈಕೊಡುತ್ತದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡಗಳ ನಿರ್ವಹಣೆ ಕೊರತೆಯಿಂದಾಗಿ ಕಿಟಕಿ ಗಾಜುಗಳು ಒಡೆದಿವೆ. ವಿದ್ಯಾರ್ಥಿಗಳಿಗೆ ಶುದ್ಧ ನೀರಿನ ಸೌಲಭ್ಯವಿಲ್ಲ. ಕೊಳವೆಬಾವಿ ನೀರನ್ನೇ ಪೂರೈಸಲಾಗುತ್ತಿದೆ. ಕಾಲೇಜಿನಲ್ಲಿ ಪ್ರಾಚಾರ್ಯರು, 7 ಜನ ಉಪನ್ಯಾಸಕರಿಗೆ ವಸತಿ ಗೃಹ ನಿರ್ಮಿಸಲಾಗಿದೆ. ಸಿಬ್ಬಂದಿಗೆ ನಿರ್ಮಿಸಲಾದ ವಸತಿಗೃಹಗಳಲ್ಲಿ ವಾಸಿಸುವುದರಿಂದ ಉಪನ್ಯಾಸಕರ ವಸತಿಗೃಹಗಳು ನಿರುಪಯುಕ್ತವಾಗಿವೆ.
ಹೋರಾಟಕ್ಕೆ ಫಲವಿಲ್ಲ: ಕಾಲೇಜಿನ ವಸತಿ ನಿಲಯದಲ್ಲಿ ಅಡುಗೆ ಸೇರಿ ಇತರೆ ಸಮಸ್ಯೆ ಕುರಿತು ಎರಡು ಬಾರಿ ಹೋರಾಟ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಹುದ್ದೆಗಳು ಖಾಲಿ:ಮೊರಾರ್ಜಿ ದೇಸಾಯಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯದಲ್ಲಿ ಮೇಲ್ವಿಚಾರಕರು, ಸ್ಟಾಫ್‌ನರ್ಸ್ ಹುದ್ದೆ ಖಾಲಿ ಇವೆ. ಲಾಲ್ ಅಹ್ಮದ್ ಎಂಬವರಿಗೆ ಪ್ರಭಾರ ನೀಡಲಾಗಿದೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಸ್ಟಾಫ್ ನರ್ಸ್ ಅವಶ್ಯಕತೆ ಇದೆ. ಕಾಲೇಜು ಆರಂಭದಲ್ಲೇ ಗುತ್ತಿಗೆ ಮೂಲಕ ಸ್ಟಾಫ್‌ನರ್ಸ್ ನೇಮಕ ಮಾಡಲಾಗಿತ್ತು. ಇದೀಗ ಮೂರ್‍ನಾಲ್ಕು ವರ್ಷಗಳಿಂದ ನರ್ಸ್ ಇಲ್ಲ.
ಕ್ರೀಡಾ ಮೈದಾನವಿಲ್ಲ:ಕಾಲೇಜು ಆವರಣದ ಎದುರು ವಿಶಾಲವಾದ ಮೈದಾನವಿದೆ. ಗುಡ್ಡ ಅಗೆದು ಕಾಲೇಜು ನಿರ್ಮಿಸಲಾಗಿದೆ. ಕಾಮಗಾರಿ ಆರಂಭದಲ್ಲಿ ಅಗೆದು ಬಿಟ್ಟ ತೆಗ್ಗು, ಕಲ್ಲುಗಳನ್ನು ಹಾಗೇ ಬಿಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆಟವಾಡಲು ಮೈದಾನ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳು ಕಾಲೇಜು ಪಕ್ಕದಲ್ಲಿರುವ ಕ್ರೀಡಾಂಗಣಕ್ಕೆ ಹೋಗಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗುತ್ತಾರೆ.
ಎಸ್‌ಡಿಎ ಎರವಲು ಸೇವೆ: ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿದ್ದ ದ್ವಿತೀಯ ದರ್ಜೆ ಕ್ಲರ್ಕ್ ಶಾಸಕರ ಸಂಬಂಧಿಕರು ಎಂಬ ಕಾರಣಕ್ಕೆ ಅವರನ್ನು ಎಸ್‌ಟಿ ಬಾಲಕಿಯರ ವಸತಿ ನಿಲಯಕ್ಕೆ ಎರವಲು ಸೇವೆಗೆ ನಿಯುಕ್ತಿಗೊಳಿಸಲಾಗಿದೆ. ಅಲ್ಲಿ ಮೇಲ್ವಿಚಾರಕಿ ಹುದ್ದೆ ನಿಭಾಹಿಸುತ್ತಿದ್ದಾರೆ. ಹೀಗಾಗಿ ಕಾಲೇಜಿನಲ್ಲಿನ ಕಡತಗಳ ವಿಲೇವಾರಿ,ಇತರೆ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ. ಅವರ ಎರವಲು ಸೇವೆ ರದ್ದು ಮಾಡಬೇಕು ಎಂಬ ಮಾತುಗಳು ಕಾಲೇಜು ವಲಯದಲ್ಲಿ ಕೇಳಿಬರುತ್ತಿದೆ