ದೇವದುರ್ಗ: ಪಟ್ಟಣದ ಸಿದ್ದರಾಮೇಶ್ವರ ಜಾತ್ರೆ ಪ್ರಯುಕ್ತ ಪಟ್ಟಣದ ಪ್ರಮುಖ ರಸ್ತೆಯಲ್ಲೇ ಜಾನುವಾರು ಸಂತೆ ನಡೆಯುತ್ತಿರುವುದರಿಂದ ಜನ, ವಾಹನ ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಪಟ್ಟಣದ ಪ್ರಮುಖ ರಸ್ತೆಯಲ್ಲೇ ಕೋರ್ಟ್, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಸಾರ್ವಜನಿಕ ಕ್ಲಬ್, ಪುರಸಭೆ ಕಚೇರಿ, ಕಂದಾಯ ನಿರೀಕ್ಷಕರ ಕಾರ್ಯಾಲಯ ಇವೆ. ಈ ರಸ್ತೆ ಯಾವಾಗಲೂ ಜನ, ವಾಹನ ದಟ್ಟಣೆಯಿಂದ ಕೂಡಿರುತ್ತದೆ.
ಈ ರಸ್ತೆಯಲ್ಲೇ ಜಾನುವಾರು ಸಂತೆ ಮತ್ತು ಹಗ್ಗ, ಬಾರುಕೋಲು, ಗೆಜ್ಜೆ ಇತರೆ ವಸ್ತುಗಳನ್ನು ಮಾರಲಾಗುತ್ತಿದೆ. ಜಾನುವಾರು ಸಂತೆಯಲ್ಲಿ ಮುದ್ದೇಬಿಹಾಳ, ಸುರಪುರ, ಮಾನ್ವಿ, ಲಿಂಗಸುಗೂರು, ಗಬ್ಬೂರು, ಜಾಲಹಳ್ಳಿ ಸೇರಿ ತಾಲೂಕು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳ ನೂರಾರು ರೈತರು ಜಾನುವಾರು ಮಾರಾಟ, ಖರೀದಿಗೆ ಆಗಮಿಸಿದ್ದಾರೆ. ರಸ್ತೆಯಲ್ಲೇ ಜಾನುವಾರುಗಳನ್ನು ಕಟ್ಟಿ, ಹಗ್ಗ, ಬಾರುಕೋಲು, ಗೆಜ್ಜೆ ಸರ ಇತರೆ ಸಾಮಗ್ರಿ ಮಾರುವುದರಿಂದ ಸುಗಮ ಸಂಚಾರಕ್ಕೆ ಅಡೆತಡೆ ಆಗುತ್ತಿದೆ.
ಪ್ರತ್ಯೇಕ ಜಾಗವಿಲ್ಲ: ಜಾನುವಾರುಗಳ ಮಾರಾಟಕ್ಕೆ ಜಾತ್ರಾ ಸಮಿತಿ ಇಲ್ಲವೇ ಪುರಸಭೆ ಪ್ರತ್ಯೇಕ ಜಾಗೆ ನಿಗದಿಪಡಿಸಿ ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಆದರೆ ಈ ಬಗ್ಗೆ ಕ್ರಮ ವಹಿಸದ್ದರಿಂದ ರಸ್ತೆಯಲ್ಲೇ ಜಾನುವಾರು ಸಂತೆ ನಡೆಯುತ್ತಿದೆ. ಒಂದೆಡೆ ರಸ್ತೆಯಲ್ಲಿ ಜಾನುವಾರು ಸಂತೆ ನಡೆಯುತ್ತಿರುವುದರಿಂದ ಜನ, ವಾಹನ ಸಂಚಾರಕ್ಕೆ ಅಡೆತಡೆ ಆಗಿದ್ದರೆ, ಇನ್ನೊಂದೆಡೆ ಅಡ್ಡಾದಿಡ್ಡಿ ಬೈಕ್‌ಗಳ ಓಡಾಟ, ವಾಹನ ದಟ್ಟಣೆಯಿಂದ ಜಾನುವಾರು ಸಂತೆಗೆ ಬಂದ ರೈತರು ಭಯಪಡುವಂತಾಗಿದೆ.
ವಹಿವಾಟು ಮಂದಗತಿ: ಜಾನುವಾರು ಸಂತೆಯಲ್ಲಿ ಜಾನುವಾರುಗಳ ತಳಿಗನುಸಾರವಾಗಿ 50ರಿಂದ 1 ಲಕ್ಷ ರೂ.ವರೆಗೆ ಬೆಲೆ ಇದೆ. ಕೆಲ ರೈತರು ಬೆಲೆ ಕೇಳಿ ಹೋಗುತ್ತಿದ್ದು, ಖರೀದಿ-ಮಾರಾಟ ಮಂದಗತಿಯಲ್ಲಿ ಸಾಗುತ್ತಿದೆ. ಜಾನುವಾರುಗಳ ಖರೀದಿಗೆ ರೈತರು ಆಸಕ್ತಿ ತೋರದ್ದರಿಂದ ಎತ್ತುಗಳ ಕೊರಳು ಬಾರ್, ಬಾರುಕೋಲು, ಗೆಜ್ಜೆಪಟ್ಟಿ, ಮಗಡ್, ಮೂಗುದಾಣ ಸೇರಿ ಇತರೆ ವಸ್ತುಗಳ ಖರೀದಿ ಪ್ರಕ್ರಿಯೆ ಕೂಡ ಮಂದಗತಿಯಲ್ಲಿ ನಡೆದಿದೆ. ಮಾನ್ವಿ, ಸಿರವಾರ ಪಟ್ಟಣದ ವ್ಯಾಪಾರಸ್ಥರು ಅಂಗಡಿ ಹಾಕಿದ್ದು, ನಿತ್ಯ ಕೇವಲ 1 ಸಾವಿರದಿಂದ 1500 ರೂ.ವರೆಗೆ ವ್ಯಾಪಾರ ವಾಗುತ್ತಿದೆ ಎನ್ನುತ್ತಾರೆ ಮಾನ್ವಿಯ ವರ್ತಕ ಚಿನ್ನಪ್ಪ.
ಸೌಲಭ್ಯ ಮರೀಚಿಕೆ: ಇನ್ನು ಜಾನುವಾರು ಸಂತೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ವಿದ್ಯುತ್ ಸೌಲಭ್ಯ ಕೂಡ ಇಲ್ಲ ಹೀಗಾಗಿ ಹಿಂದೆ ತಿಂಗಳುವರೆಗೆ ನಡೆಯುತ್ತಿದ್ದ ಜಾನುವಾರು ಜಾತ್ರೆ ವಾರದಲ್ಲೇ ಮುಗಿದು ಹೋಗುತ್ತದೆ ಎನ್ನುತ್ತಾರೆ ರೈತ ಬಸಲಿಂಗಪ್ಪ ದೊಡ್ಡಮನಿ.