ದೇವದುರ್ಗ: ಪಟ್ಟಣ ಸೇರಿ ತಾಲೂಕಿನ 63 ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಕೋಣೆಗಳು ಶಿಥಿಲಗೊಂಡಿವೆ. ಹೊಸದಾಗಿ 5 ಬಿಸಿಯೂಟ ಕೋಣೆಗಳಿಗೆ ಪ್ರಸ್ತವನೆ ಸಲ್ಲಿಸಲಾಗಿದೆ.
ತಾಲೂಕಿನ ಅಂಚೆಸುಗೂರು, ಅರಕೇರಾ, ಜಾಲಹಳ್ಳಿ, ಗಲಗ, ಕಜ್ಜಿಬಂಡಿ, ದೇವರಗುಡ್ಡ, ಸೂಗುರಾಳ, ಸಪ್ತಗಿರಿ ಕಾಲೋನಿ, ಕೆಇಬಿ ಕಾಲೋನಿ, ವಾಚ ನಾಯಕ ತಾಂಡಾ ಸೇರಿ 63 ಶಾಲೆಗಳಲ್ಲಿ ಬಿಸಿಯೂಟ ಕೋಣೆಗಳು ಶಿಥಿಲಗೊಂಡಿವೆ. ಮಳೆ ಬಂದಾಗ ಬಿಸಿಯೂಟದ ಆಹಾರ ಪದಾರ್ಥಗಳು ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಅಡುಗೆ ಸಿಬ್ಬಂದಿ ಪರದಾಡುವಂತಾಗಿದೆ. ಕೋಣೆಗಳ ಸಮಸ್ಯೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಅನುದಾನ ಬಂದರೆ ದುರಸ್ತಿ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆನ್ನಲಾಗಿದೆ.
ಪ್ರಸ್ತಾವನೆ: ತಾಲೂಕಿನ ಕೊತ್ತದೊಡ್ಡಿ, ಕೆ.ಇರಬಗೇರಾ, ಶಿವಂಗಿ, ಆದರ್ಶ ಸೇರಿ 5 ಆರ್‌ಎಂಎಸ್‌ಎ ಶಾಲೆಗಳಲ್ಲಿ ಬಿಸಿಯೂಟ ಕೋಣೆಗಳೇ ಇಲ್ಲ. ಶಾಲೆ ಹೊರಗೆ ಬಿಸಿಯೂಟ ತಯಾರಿಸಲಾಗುತ್ತಿದೆ. ಮಳೆ ಬಂದರೆ ಶಾಲೆಯ ಯಾವುದಾದರೊಂದು ಕೋಣೆಯಲ್ಲಿ ಅಡುಗೆ ತಯಾರಿಸಲಾಗುತ್ತಿದೆ. ಈ ಶಾಲೆಗಳಿಗೆ ಬಿಸಿಯೂಟ ಕೋಣೆ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂದು, ನಾಳೆ ಎಂದು ದಿನ ದೂಡಲಾಗುತ್ತಿದೆ ಎಂದು ಶಿಕ್ಷಕರು ದೂರಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ: ಪಟ್ಟಣ ಸೇರಿ ತಾಲೂಕಿನಾದ್ಯಂತ 349 ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿ ಮತ್ತು ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಅಡುಗೆ ಸಿಬ್ಬಂದಿ ನೀರಿದ್ದಲ್ಲಿಗೆ ಹೋಗಿ ತರುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೊಳವೆಬಾವಿಗಳ ಉಪ್ಪು ನೀರನ್ನೇ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.
ನೀರಿನ ಸೌಲಭ್ಯ ಕಲ್ಪಿಸಲು ಹಿಂದೇಟು: ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗ್ರಾಮ ಪಂಚಾಯಿತಿ ಮೂಲಕ ಶಾಲೆಗಳಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರೂ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಚೇರಿಗೆ ಬರುವುದೇ ಅಪರೂಪ. ಹೀಗಾಗಿ ಶಾಲೆಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗದಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಆಗ್ರಹ: ಕೂಡಲೇ ಜಿಲ್ಲಾಡಳಿತ, ಸರ್ಕಾರ ಶಿಥಿಲಗೊಂಡ ಬಿಸಿಯೂಟ ಕೋಣೆ ದುರಸ್ತಿಗೊಳಿಸಬೇಕು. ಹೊಸದಾಗಿ ಬಿಸಿಯೂಟ ಕೋನೆ ಮಂಜೂರು ಮಾಡಬೇಕು. ನೀರಿನ ಸಮಸ್ಯೆ ಪರಿಹರಿಸ ಬೇಕೆಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಶಬ್ಬೀರ ಜಾಲಹಳ್ಳಿ ಆಗ್ರಹಿಸಿದ್ದಾರೆ.
ಶಿಥಿಲಗೊಂಡ ಬಿಸಿಯೂಟ ಕೋಣೆ ಹೊಸದಾಗಿ ನಿರ್ಮಿಸಲು ಕೋಣೆಗಳ ಪಟ್ಟಿ ತಯಾರಿಸಿ ಈಗಾಗಲೇ ಸರಕಾರಕ್ಕೆ ಕಳಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅನುದಾನ ಬಿಡಗಡೆ ಮಾಡುವ ಭರವಸೆ ನೀಡಿದ್ದಾರೆ.
••ಇಂದಿರಾ ಆರ್.,
ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ರಾಯಚೂರು