ದೇವದುರ್ಗ: ತಾಲೂಕಿನ ಕರಡಿಗುಡ್ಡ ಗ್ರಾಮದ ಸರಕಾರಿ ಶಾಲೆ ಕಟ್ಟಡಕ್ಕಾಗಿ ಗ್ರಾಮದ ಸರ್ಕಾರಿ ಜಾಗೆಯಲ್ಲಿ 2 ಎಕರೆ ಜಮೀನನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹೆಸರಿಗೆ ಕಾಯ್ದಿರಿಸುವಂತೆ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಆದೇಶಿಸಿದ್ದರೂ ಈವರೆಗೆ ತಾಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸಿಲ್ಲ. ಹೀಗಾಗಿ ಕರಡಿಗುಡ್ಡ ಗ್ರಾಮದಲ್ಲಿ ಶಾಲಾ ಆವರಣದಲ್ಲಿನ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
Advertisement
ಸುಂಕೇಶ್ವರಹಾಳ ಕ್ಲಸ್ಟರ್ ವ್ಯಾಪ್ತಿಯ ಗಬ್ಬೂರು ಹೋಬಳಿಯ ಕರಡಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಬೀಗ ಜಡಿಯಲಾಗಿದೆ. ಆರೇಳು ವರ್ಷಗಳಿಂದ ಶಿಕ್ಷಕರು ಶಾಲಾ ಆವರಣದಲ್ಲಿನ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 45ರಿಂದ 50 ಮಕ್ಕಳಿದ್ದಾರೆ.
Related Articles
Advertisement
ಹಳೆ ಕಟ್ಟಡದಲ್ಲಿ ಬಿಸಿಯೂಟ: ಇನ್ನು ಮಕ್ಕಳಿಗೆ ಶಾಲೆಯ ಹಳೆ ಕಟ್ಟಡದಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದ್ದು, ಆಹಾರ ಸಾಮಗ್ರಿಗಳನ್ನು ಅಲ್ಲಿಯೇ ಇರಿಸಲಾಗಿದೆ. ಕೆಲ ಮಕ್ಕಳು ಮರದ ಕೆಳಗೆ ಊಟ ಮಾಡಿದರೆ ಮತ್ತೆ ಕೆಲವರು ತಟ್ಟೆಯಲ್ಲಿ ಬಿಸಿಯೂಟ ಹಾಕಿಸಿಕೊಂಡು ಮನೆಗೆ ಹೋಗಿ ಊಟ ಮಾಡಿ ಬರುವ ಪರಿಸ್ಥಿತಿ ಇದೆ.
ಸೌಲಭ್ಯಗಳ ಕೊರತೆ: ಇನ್ನು ಶಾಲೆಗೆ ಕಟ್ಟಡವಿಲ್ಲದ್ದರಿಂದ ನೀರು, ಶೌಚಾಲಯ ಸೌಲಭ್ಯವೂ ಇಲ್ಲದಾಗಿದೆ. ಮಕ್ಕಳ ದಾಖಲಾತಿಗಳನ್ನು, ಹಾಜರಿ ಪುಸ್ತಕ ಸೇರಿ ಇತರೆ ದಾಖಲೆಗಳನ್ನು ಇಡುವುದೇ ಶಿಕ್ಷಕರಿಗೆ ಸವಾಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಅವರು ಕರಡಿಗುಡ್ಡ ಶಾಲೆ ಸ್ವಂತ ಕಟ್ಟಡಕ್ಕಾಗಿ 2 ಎಕರೆ ಜಮೀನು ಕಾಯ್ದಿರಿಸುವಂತೆ ಆದೇಶಿಸಿದ್ದರೂ ಈ ಬಗ್ಗೆ ಕ್ರಮ ವಹಿಸದ ತಾಲೂಕು ಮತ್ತು ಜಿಲ್ಲಾ ಅಧಿಕಾರಿಗಳ ಧೋರಣೆ ಖಂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಎಚ್ಚರಿಸಿದ್ದಾರೆ.