ದೇವದುರ್ಗ: ಕರಡಿಗುಡ್ಡ ಶಾಲಾ ಮಕ್ಕಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ಉಪನಿರ್ದೇಶಕರ ಹೆಸರಿನಲ್ಲಿ ನಿವೇಶನ ಕಾಯ್ದಿರಿಸಿದೆ. ಈ ಕುರಿತು ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರ ಬಗ್ಗೆ ನ.20ರಂದು “ಕರಡಿಗುಡ್ಡ ಮಕ್ಕಳಿಗೆ ಮರದ ಕೆಳಗೇ ಪಾಠ’ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಇದಕ್ಕೆ ಎಚ್ಚೆತ್ತ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ವರದಿಗೆ ಸ್ಪಂದಿಸಿದ ಮೈರಾಡ್ ಸಂಸ್ಥೆ 20 ಸಾವಿರ ರೂ. ಸಹಾಯಧನ ನೀಡಿದ್ದು, ಶಾಲಾ ಅನುದಾನ 27 ಸಾವಿರ ಸೇರಿ 47 ಸಾವಿರ ರೂ. ಅನುದಾನದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಜಾಗೆದಲ್ಲಿ ತಾತ್ಕಾಲಿಕ ಟಿನ್‌ಶೆಡ್ ಮತ್ತು ಹಸಿರು ಪರದೆಯಿಂದ ಕೊಠಡಿ ನಿರ್ಮಿಸಲಾಗಿತ್ತು. ಆದರೆ ಇದೀಗ ಜಿಲ್ಲಾ ಮತ್ತು ತಾಲೂಕು ಆಡಳಿತ ಸರಕಾರಿ ನಿವೇಶನದಲ್ಲಿ 2 ಎಕರೆ ಜಮೀನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರ ಹೆಸರಿಗೆ ವರ್ಗಾಯಿಸಿ ಕಾಯ್ದಿರಿಸಲಾಗಿದೆ. ಸುಮಾರು ವರ್ಷಗಳಿಂದ ಕರಡಿಗುಡ್ಡ ಶಾಲಾ ಮಕ್ಕಳು ಮರದ ಕೆಳಗೆ ಕಲಿಯುವ ಸ್ಥಿತಿ ಇತ್ತು.
ಹಿಂದಿನ ಜಿಲ್ಲಾಧಿ ಕಾರಿ ಬಿ.ಶರತ್ ಸರಕಾರಿ ನಿವೇಶನದಲ್ಲಿ ಜಮೀನು ನೀಡಿ ಶಾಲಾ ಕಟ್ಟಡ ನಿರ್ಮಿಸಲು ಉಪನಿರ್ದೇಶಕರ ಹೆಸರಲ್ಲಿ ಪಹಣಿ ಕಾಯ್ದಿರಿಸುವಂತೆ ಆದೇಶಿಸಿದ್ದರೂ ಅಧಿಕಾರಿಗಳ ವಿಳಂಬ ನೀತಿಯಿಂದ ಮಕ್ಕಳು ಸ್ವಂತ ಕಟ್ಟಡ ಭಾಗ್ಯದಿಂದ ವಂಚಿತರಾಗಿದ್ದರು. ಈ ಬಗ್ಗೆ ಉದಯವಾಣಿ ಪತ್ರಿಕೆ ಶಾಲೆ ಕಟ್ಟಡದ ಬಗ್ಗೆ ವರದಿ ಪ್ರಕಟಿಸಿದ್ದರಿಂದ ಮಕ್ಕಳಿಗೆ ಸ್ವಂತ ಕಟ್ಟಡ ಭಾಗ್ಯದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಅನಾರೋಗ್ಯದ ನಿಮಿತ್ತ ರಜೆಯಲ್ಲಿದ್ದ ಕಾರಣ ಸ್ವಲ್ಪ ವಿಳಂಬವಾಗಿದೆ. ಕರಡಿಗುಡ್ಡ ಸರಕಾರಿ ಶಾಲೆ ಕಟ್ಟಡ ನಿರ್ಮಿಸಲು 2 ಎಕರೆ ಜಮೀನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರ ಹೆಸರಿಗೆ ಪಹಣಿ ಕಾಯ್ದಿರಿಸಲಾಗಿದೆ.
ಮಂಜುನಾಥ
ಭೋಗಾವತಿ, ತಹಶೀಲ್ದಾರ್