ದೇವದುರ್ಗ: ಬಡವರಿಗೆ ಆರ್ಥಿಕ ಶ್ರೀಮಂತಿಕೆಗೆ ಬರವಿರಬಹುದು, ಆದರೆ ಭಕ್ತಿಗೆ ಬರವಿಲ್ಲ ಎನ್ನುವ ಮಾತಿಗೆ ಅನ್ವರ್ಥ ಎನ್ನುವಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀಶೈಲ ಪಾದಯಾತ್ರಿಕರ ಸೇವೆಗಾಗಿ ಗ್ರಾಮಸ್ಥರು, ಭಕ್ತರು ಟೊಂಕಕಟ್ಟಿ ನಿಂತಿದ್ದಾರೆ.
ಯುಗಾದಿ ನಿಮಿತ್ತ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಾರೆ. ತಾಲೂಕಿನ ಹಲವು ಗ್ರಾಮಗಳ ಮಾರ್ಗವಾಗಿ ಶ್ರೀಶೈಲಕ್ಕೆ ತೆರಳುತ್ತಾರೆ. ಹೋಳಿ ಹುಣ್ಣಿಮೆ ಮಾರನೆ ದಿನದಿಂದ ಆರಂಭವಾದ ಭಕ್ತರ ಪಾದಯಾತ್ರೆ ಯುಗಾದಿ ಅಮಾವಾಸ್ಯೆ ಎರಡ್ಮೂರು ದಿನಗಳ ಮುಂಚೆಗೆ ಸಮಾರೋಪಗೊಳ್ಳಲಿದೆ.
ಈ 8-10 ದಿನಗಳಲ್ಲಿ ಸಾವಿರಾರು ಭಕ್ತರು ತಾಲೂಕಿನ ಮಾರ್ಗವಾಗಿ ಪಾದಯಾತ್ರೆ ನಡೆಸಿ ಭಕ್ತಿಭಾವ ಮೆರೆಯುತ್ತಾರೆ. ವಿಜಯಪುರ, ಯಾದಗಿರಿ, ಕಲಬುರಗಿಯ ಗಡಿಭಾಗ, ಬಾಗಲಕೋಟೆ ಜಿಲ್ಲೆಯ ಕೊನೆ ಭಾಗದ ಹಳ್ಳಿಗಳ ಸಾವಿರಾರು ಭಕ್ತರು ದೇವದುರ್ಗ ತಾಲೂಕು ತಿಂಥಣಿ ಬ್ರಿಡ್ಜ್ ಹಾಗೂ ಹೂವಿನಹೆಡಗಿ ಸೇತುವೆ ಮೂಲಕ ರಾಯಚೂರು ರಾಜ್ಯ ಹೆದಾರಿಯಲ್ಲಿ ಪಾದಯಾತ್ರೆ ನಡೆಸುತ್ತಾರೆ.
ತಿಂಥಣಿಯಿಂದ ಗಬ್ಬೂರುವರೆಗೆ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಶಿಬಿರಗಳು ಆರಂಭವಾಗಿವೆ. ಈ ಶಿಬಿರಗಳಲ್ಲಿ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ವಿಶ್ರಾಂತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ ಸ್ನಾನಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ತಾಲೂಕಿನಲ್ಲಿ ಸುಮಾರು 30ಕ್ಕೂ ಹೆಚ್ಚುಕಡೆ ಪಾದಯಾತ್ರೆಗಳ ಸೇವೆಗಾಗಿ ಅನ್ನಸಂತರ್ಪಣೆ ಶಿಬಿರವನ್ನು ಸಾರ್ವಜನಿಕರು ಆರಂಭಿಸಿದ್ದಾರೆ. ತಾಲೂಕಿನ ಹೂವಿನಹೆಡಗಿ, ದೇವದುರ್ಗ ಪಟ್ಟಣದಲ್ಲಿ ನಾಲ್ಕೈದು ಕಡೆ, ಗೌರಂಪೇಟೆ, ಕೊಪ್ಪರ ಕ್ರಾಸ್, ಮಿಯ್ನಾಪುರ ಕ್ರಾಸ್, ಚಿಕ್ಕಹೊನ್ನಕುಣಿ, ಚಿನ್ನಾಪುರ, ಸುಂಕೇಶ್ವರಹಾಳ, ಗಬ್ಬೂರು, ಸುಲ್ತಾನಪುರ ಸೇರಿ ವಿವಿಧೆಡೆ ಅನ್ನಸಂತರ್ಪಣೆ ಶಿಬಿರ ಆಯೋಜಿಸಲಾಗಿದೆ. ಕುಡಿವ ನೀರು, ತಂಪು ಪಾನೀಯ, ಔಷಧ ಸೌಲಭ್ಯ ಕಲ್ಪಿಸಲಾಗಿದೆ.
ಗೌರಂಪೇಟೆಯಲ್ಲಿ ಸತತ ನಾಲ್ಕನೇ ಬಾರಿಗೆ ರೈತರೇ ಸ್ವತಃ ಅನ್ನಸಂತರ್ಪಣೆ ಶಿಬಿರ ಆರಂಭಿಸಿದ್ದು, ನಿತ್ಯ ಸಿಹಿ ಅಡುಗೆ ತಯಾರಿಸಿ ಪಾದಯಾತ್ರಿಕರಿಗೆ ಉಣಬಡಿಸುತ್ತಿದ್ದಾರೆ.
ನಮ್ಮದು ಇಂಡಿ ತಾಲೂಕು ಚಳ್ಳಿಕೇರಿ ಗ್ರಾಮ. ನಾವು ಸುಮಾರು 30ಕ್ಕೂ ಹೆಚ್ಚು ಜನರು ಸತತ 22 ವರ್ಷಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ. ಹೋಳಿ ಹುಣ್ಣಿಮೆ ನಂತರ ಪಾದಯಾತ್ರೆ ಕೈಗೊಳ್ಳುತ್ತೇವೆ. 10 ದಿನದಲ್ಲಿ ಶ್ರೀಶೈಲ ತಲುಪುತ್ತೇವೆ. ಸುಮಾರು 700 ಕಿಮೀ ದೂರವಿದ್ದು, ನಿತ್ಯ 60-65 ಕಿಮೀ ಪಾದಯಾತ್ರೆ ಮಾಡುತ್ತೇವೆ. ಭಕ್ತರು ಆಯೋಜಿಸುವ ಅನ್ನಸಂತರ್ಪಣೆ ಶಿಬಿರಗಳೇ ನಮಗೆ ಆಸರೆಯಾಗಿವೆ.
ಇಂಡಿ ತಾಲೂಕಿನ
ಚಳ್ಳಕೇರಿ ಗ್ರಾಮದ ಮಹಿಳೆಯರು