Advertisement

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

10:49 AM Jun 02, 2019 | Naveen |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

Advertisement

ಕೆಲ ತೆಗ್ಗು ಪ್ರದೇಶಗಳಿಗೆ ನೀರು ಮತ್ತು ಚರಂಡಿ ಘನತ್ಯಾಜ್ಯ ನುಗ್ಗಿದರಿಂದ ನಿವಾಸಿಗಳು ರಾತ್ರಿ ಜಾಗರಣೆ ಮಾಡಿದರು. ಗೌತಮ ವಾರ್ಡ್‌ನಿಂದ ಬಸ್‌ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯ ಬರುವ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಅತಿ ಹೆಚ್ಚು ಮಳೆ ನೀರು ಸಂಗ್ರಹವಾದರಿಂದ ಭಕ್ತರು ಒಂದಿಲ್ಲೊಂದು ಸಮಸ್ಯೆ ಎದುರಿಸಬೇಕಾಯಿತು. ಗೌತಮ ವಾರ್ಡ್‌ನ ನಿವಾಸಿ ಟಿ. ಶಿವಪ್ಪ ಚಲುವಾದಿ ತಮ್ಮ ಮನೆಗೆ ನುಗ್ಗಿದ ನೀರು ತೆಗೆದು ಹಾಕಲು ಪರದಾಡಿದರು. ವಡ್ಡರಕಟ್ಟಿ ಹಳ್ಳ ರಾಜ ಕಾಲುವೆ ಚರಂಡಿ ನೀರು ಹರಿದು ಹೋಗುವ ಮಾರ್ಗದಲ್ಲೇ ಪುರಸಭೆ ಸಿಬ್ಬಂದಿ ಮಣ್ಣಿನ ಕಸ ಹಾಕಿದ್ದರು. ನೀರು ಹೋಗಲು ಸೂಕ್ತ ಮಾರ್ಗ ಇರಲಿಲ್ಲ. ಹಾಗಾಗಿ ತಡರಾತ್ರಿ ಸುರಿದ ಮಳೆ ನೀರು, ಪ್ಲ್ಯಾಸ್ಟಿಕ್‌ ಕಸ ಕಡ್ಡಿ ಮನೆಗೆ ನುಗ್ಗಿದ್ದರಿಂದ ತಿಪ್ಪಣ್ಣ, ಸಿದ್ದಪ್ಪ ಕುಂಬಾರ ಸ್ವಚ್ಛತೆಗಾಗಿ ರಾತ್ರಿ ಜಾಗರಣೆ ಮಾಡಿದರು. ಚರಂಡಿಯಲ್ಲಿನ ಕಸ ಕೂಡಲೇ ವಿಲೇವಾರಿ ಮಾಡುವಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಹಾಗೂ ಸದಸ್ಯರಿಗೆ ಆಗ್ರಹಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಶಿಕ್ಷಕರು, ಸಾರ್ವಜನಿಕರು ಓಡಾಡಲು ತೀವ್ರ ತೊಂದರೆ ಉಂಟಾಯಿತು. ಬಸ್‌ ನಿಲ್ದಾಣ ಒಳಗೆ ಹೋಗುವ ಮುಂಭಾಗದಲ್ಲಿ ಬಹುತೇಕ ನೀರು ಸಂಗ್ರಹವಾಗಿದೆ. ಸೀಪತಗೇರಾ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯ ಕೆಲಸಗಳಾಗದೇ ಇರುವ ಕಾರಣ ಮಳೆ ನೀರು ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಸಂಗ್ರವಾಗಿದೆ. ಹೀಗಾಗಿ ನಿವಾಸಿಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಭಗತ್‌ಸಿಂಗ್‌ ವಾರ್ಡ್‌ ನಲ್ಲಿ ಚರಂಡಿಯಲ್ಲಿ ಸಂಗ್ರಹವಾದ ಪ್ಲ್ಯಾಸ್ಟಿಕ್‌ ಘನತ್ಯಾಜ್ಯ ಮಳೆ ನೀರಿನ ರಬಸಕ್ಕೆ ರಸ್ತೆಗೆ ಹರಿದು ಎಲ್ಲೆಂದರಲ್ಲಿ ಬಿದ್ದು ಸಂಚಾರಕ್ಕೆ ಸ್ವಲ್ಪ ತೊಂದರೆ ಉಂಟಾಯಿತು. ಗೌತಮ್‌ ವಾರ್ಡ್‌ನ ಚರಂಡಿಯಲ್ಲಿ ದೊಡ್ಡ ಪ್ರಮಾಣದ ಕಲ್ಲುಗಳು ಬಿದ್ದಿವೆ. ಚರಂಡಿ ನೀರು ಹೋಗಲು ಮಾರ್ಗವಿಲ್ಲದ್ದರಿಂದ ದುರ್ನಾತ ಬೀರುತ್ತಿತು. ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಚಲುವಾದಿ ನೇತೃತ್ವದಲ್ಲಿ ನಾಲ್ಕೈದು ಜನರು ಸೇರಿ ಚರಂಡಿಯಲ್ಲಿದ್ದ ಕಲ್ಲುಗಳನ್ನು ತೆಗೆದ ಬಳಿಕ ಪೌರ ಕಾರ್ಮಿಕರು ಸ್ವಚ್ಛ ಮಾಡಿದ ಪ್ರಸಂಗ ಶನಿವಾರ ನಡೆಯಿತು.

ಪಟ್ಟಣದ ಆನಂದ ಚಿತ್ರ ಮಂದಿರ, ನಗರಗುಂಡ ಕ್ರಾಸ್‌, ಮಸರಕಲ್, ಗಬ್ಬೂರು, ಜೆ. ಜಾಡಲದಿನ್ನಿ ಗ್ರಾಮದಲ್ಲಿ ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿವೆ. ಒಂದು ಟಿಸಿಗೆ ಸುಮಾರು 80ಸಾವಿರದಿಂದ 1ಲಕ್ಷ ರೂ. ಹೀಗಾಗಿ ಲಕ್ಷಾಂತರ ರೂ. ಹಾನಿ ಉಂಟಾಗಿದೆ ಎಂದು ಜೆಸ್ಕಾಂ ಎಇಇ ಬಸವರಾಜ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next