Advertisement

ಹಂಪಿ ವಿವಿ ವಿಸ್ತರಣಾ ಕೇಂದ್ರ ಕಟ್ಟಡ ನನೆಗುದಿಗೆ

12:14 PM Dec 16, 2019 | Naveen |

„ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರದ ಕಟ್ಟಡಕ್ಕಾಗಿ 20 ಎಕರೆ ಭೂಮಿ ಕಾಯ್ದಿರಿಸಿದ್ದರೂ, ಕಟ್ಟಡಕ್ಕೆ 4.54 ಕೋಟಿ ರೂ. ಅನುದಾನ ಮಂಜೂರಾಗಿ ವರ್ಷವಾದರೂ ಟೆಂಡರ್‌ ಪ್ರಕ್ರಿಯೆ ವಿಳಂಬದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಕಾಲ ಕೂಡಿಬಂದಿಲ್ಲ.

Advertisement

2017-18ನೇ ಸಾಲಿನ ಆಗಸ್ಟ್‌ದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ಕಾಲೇಜು ಆರಂಭಗೊಂಡಿದೆ. ಇಲ್ಲಿನ ಆರೇಳು ಕೊಠಡಿಗಳಲ್ಲಿ ಕಾಲೇಜು ನಡೆಸಲಾಗುತ್ತಿದೆ. ಕನ್ನಡ ಸಾಹಿತ್ಯ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಸೇರಿ 64 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನು ಸಂಗೀತ ವಿಷಯಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ವಿಷಯವಾರು ಉಪನ್ಯಾಸಕರು, ಪ್ರಾಚಾರ್ಯರ ಹುದ್ದೆ ಭರ್ತಿ ಆಗಿವೆ. ಪರಿಚಾರಕ ಹುದ್ದೆ ಖಾಲಿ ಇದ್ದು, ತಾತ್ಕಾಲಿಕವಾಗಿ ಒಬ್ಬರನ್ನು ನೇಮಿಸಲಾಗಿದೆ.

ಸೌಲಭ್ಯ ಕೊರತೆ: ಈಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ಕ್ರೀಡಾ ಮೈದಾನ ಸೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಇದೆ. ಒಂದೇ ಕಟ್ಟಡದಲ್ಲಿ ಎರಡು ಕಾಲೇಜು ನಡೆಯುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ.

ಟೆಂಡರ್‌ ವಿಳಂಬ: ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ಕಾಲೇಜು ಕಟ್ಟಡಕ್ಕಾಗಿ ಪಟ್ಟಣದ ಹೊರವಲಯದ ಸಾಸ್ವಿಗೇರಾ ಸೀಮಾಂತರದ ಸರ್ವೇ ನಂ. 17ರಲ್ಲಿ 20 ಎಕರೆ ಜಾಗೆ ಕಾಯ್ದಿರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 2018ರ ಡಿಸೆಂಬರ್‌ 14ರಂದು 4.54 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಟ್ಟಡ ನಿರ್ಮಾಣ ಹೊಣೆಯನ್ನು ಲೋಕೋಪಯೋಗಿ ಇಲಾಖೆ ಅಧೀನದ ಭೂಸೇನಾ ನಿಗಮಕ್ಕೆ ವಹಿಸಲಾಗಿದೆ. ಆದರೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ವಿಳಂಬ ನೀತಿ ತಾಳಿದ್ದರಿಂದ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಕಟ್ಟಡ ನಿರ್ಮಾಣ ಕುರಿತು ಕಾಲೇಜಿನ ಪ್ರಾಚಾರ್ಯರು ಸಂಬಂಧಿಸಿದ ಕಚೇರಿಗೆ ಹಲವಾರು ಬಾರಿ ಅಲೆದಿದ್ದು, ಇಂದು-ನಾಳೆ ಎಂದು ದಿನ ದೂಡಲಾಗುತ್ತಿದೆ.

Advertisement

ಕಟ್ಟಡದಲ್ಲಿ ಏನೇನು ಇರಲಿವೆ: ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ನಿಯೋಜಿತ ಕಟ್ಟಡದಲ್ಲಿ 7 ಕೊಠಡಿಗಳು, ಆಫೀಸ್‌, ಗ್ರಂಥಾಲಯ ಕೊಠಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಾಣವಾಗಲಿವೆ ಎನ್ನಲಾಗಿದೆ. ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ಕಾಲೇಜಿಗೆ ಮೀಸಲಿರಿಸಿದ 20 ಎಕರೆ ಜಾಗೆ ವೈದ್ಯಕೀಯ ಕಾಲೇಜು ಆರಂಭಿಸಲು ಸೂಕ್ತವಾಗಲಿದೆ. ಅದಕ್ಕಾಗಿ ಹಂಪಿ ವಿವಿ ಹೆಸರಿಗೆ ಜಾಗೆ ನೋಂದಣಿ ತಡೆ ಹಿಡಿಯುವಂತೆ ಶಾಸಕ ಕೆ. ಶಿವನಗೌಡ ನಾಯಕ ಕಂದಾಯ ಇಲಾಖೆ ಅಧಿಕಾರಿಗೆ ಸೂಚಿಸಿದ್ದರೆನ್ನಲಾಗಿದೆ. ಆದರೆ ಇದೀಗ ಅದೇ ಜಾಗೆಯಲ್ಲಿ ವಿಸ್ತರಣಾ ಕೇಂದ್ರದ ಕಟ್ಟಡ ನಿರ್ಮಿಸಲು ಕೂಡಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ. ಕೂಡಲೇ ಕಟ್ಟಡ ಕಾಮಗಾರಿ ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕಿದೆ.

ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ನೂತನ ಕಾಲೇಜು ಕಟ್ಟಡ ನಿರ್ಮಿಸಲು ಈಗಾಗಲೇ 4.54 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 20 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಶಾಸಕರಿಗೆ ಭೇಟಿಯಾಗಿದ್ದು, ಅದಷ್ಟು ಬೇಗನೆ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಶಾಂತಪ್ಪ,
ಹಂಪಿ ಕನ್ನಡ ವಿವಿ ವಿಸ್ತರಣಾ ಕೇಂದ್ರದ ಪ್ರಾಚಾರ

Advertisement

Udayavani is now on Telegram. Click here to join our channel and stay updated with the latest news.

Next