ದೇವದುರ್ಗ: ಕಳೆದೆರಡು ವರ್ಷಗಳಿಂದ ಪಟ್ಟಣದ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಕನ್ನಡ ವಿಶ್ವ ವಿದ್ಯಾಲಯದ ಹಂಪಿ ವಿಸ್ತರಣಾ ಕೇಂದ್ರ ಕಾಲೇಜು ನಡೆಯುತ್ತಿದ್ದು ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ.
ತಾತ್ಕಾಲಿಕ ಕಚೇರಿ ಸೇರಿ ನಾಲ್ಕು ಕೋಣೆಗಳ ಸೌಲಭ್ಯ ಪಡೆದು 50 ವಿದ್ಯಾರ್ಥಿಗಳಿಗೆ ಇಲ್ಲಿ ಬೋಧಿಸಲಾಗುತ್ತಿದೆ. ಕುಡಿವ ನೀರು, ಶೌಚಾಲಯ, ಗ್ರಂಥಾಲಯ ಸೇರಿ ಅಗತ್ಯ ಮೂಲ ಸೌಲಭ್ಯಗಳು ಕಾಲೇಜಿನಲ್ಲಿ ಮರೀಚಿಕೆಯಾಗಿದೆ.
ಎರಡು ವರ್ಷದಿಂದ ಆರಂಭ: ಪಟ್ಟಣದಲ್ಲಿ ಕನ್ನಡ ವಿಶ್ವ ವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರ ಕಾಲೇಜು ಕಳೆದ 2017 ಆಗಸ್ಟ್ ತಿಂಗಳಲ್ಲಿ ಪ್ರವೇಶ ಆರಂಭಿಸಿತು. ಕಾಲೇಜು ಕಟ್ಟಡ ನಿರ್ಮಿಸಲು ಕುಲಪತಿ ಮಲ್ಲಿಕಾ ಘಂಟಿ ನೇತೃತ್ವದಲ್ಲಿ ಎರಡು ಬಾರಿ ಸರಕಾರಿ ನಿವೇಶನ ಪರಿಶೀಲನೆ ಮಾಡಲಾಯಿತು. ಶಾಸಕ ಕೆ. ಶಿವನಗೌಡ ನಾಯಕ ಕ್ರೀಡಾಂಗಣ ಪಕ್ಕದಲ್ಲಿ ನಿವೇಶನ ಕೂಡ ಗುರುತಿಸಲಾಯಿತು. ಕಾಲೇಜು ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆಯಾಗದ ಕಾರಣ ವಿಳಂಬವಾಯಿತು. ಇದೀಗ ಕಂದಾಯ ಇಲಾಖೆಯಿಂದ ಸ್ವಾಸಿಗೇರಾ ಸೀಮಾಂತರದಲ್ಲಿ 50 ಎಕರೆ ನಿವೇಶನ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದೇ ಹೇಳಲಾಗುತ್ತ್ತಿದೆ.
ಅನುದಾನ ಬಿಡುಗಡೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರದ ನೂತನ ಕಾಲೇಜು ಕಟ್ಟಡ ನಿರ್ಮಿಸಲು ಈಗಾಗಲೇ ಎಚ್ಕೆಡಿಆರ್‌ಪಿ ಯೋಜನೆಯಿಂದ 4.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಅನುದಾನ ಟೆಂಡರ್ ಪ್ರಕ್ರಿಯೆ ಹಂತದಲ್ಲೇ ಇದೆ. ಜಿಪಂ ಇಲಾಖೆಯಿಂದಲೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ನಿವೇಶನ ಮಂಜೂರಾತಿ ವಿಳಂಬ ಅದರಲ್ಲೂ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹೀಗೆ ಒಂದಿಲ್ಲೊಂದು ವಿಘ್ನ ಎದುರಾಗಿದ್ದರಿಂದ ಕಟ್ಟಡ ಆರಂಭಕ್ಕೆ ಮುಹೂರ್ತ ಇನ್ನೂ ನಿಗದಿಯಾಗಿಲ್ಲ.
ಗ್ರಂಥಾಲಯ ಸೌಲಭ್ಯವಿಲ್ಲ: ವಿಶ್ವವಿದ್ಯಾಲಯ ವಿಸ್ತರಣಾ ಕೇಂದ್ರದ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಲಿಕೆ ಜ್ಞಾನ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಇಲ್ಲಿ ಗ್ರಂಥಾಲಯ ಸೌಲಭ್ಯದ ಕೊರತೆ ಇದೆ. ಕೋಣೆಗಳ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಗ್ರಂಥಾಲಯ ಸೌಲಭ್ಯ ಗೌಣ ಎನ್ನಲಾಗುತ್ತದೆ. ಇದೀಗ ಒಬ್ಬ ಗ್ರಂಥ ಪಾಲಕರನ್ನು ನೇಮಿಸಲಾಗಿದೆ. ವಾರದಲ್ಲಿ ಪುಸ್ತಕಗಳ ಸೌಲಭ್ಯಗಳನ್ನು ಪೂರೈಸಲಾಗುತ್ತದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದೆರಡು ವರ್ಷಗಳಿಂದ ನಾಲ್ಕು ಕೋಣೆಗಳ ಸೌಲಭ್ಯ ಪಡೆದು ಹಂಪಿ ವಿಸ್ತರಣಾ ಕೇಂದ್ರದ ಕಾಲೇಜು ನಡೆಸಲಾಗುತ್ತಿದೆ. ಕುಡಿವ ನೀರು, ಶೌಚಾಲಯ ಸೇರಿ ಅಗತ್ಯ ಮೂಲ ಸೌಲಭ್ಯ ಮರೀಚಿಕೆ ಮಧ್ಯೆ 50 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚುನಾವಣೆ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಬಳಕೆಯಾಗುವ ಸರ್ಕಾರಿ ಕಾಲೇಜು ಈಗ ಅಸ್ವಚ್ಛತೆ ತಾಣವಾಗಿದೆ.
ಸಂಗೀತ ವಿಭಾಗ ಇಲ್ಲ: ಕನ್ನಡ ವಿಶ್ವ ವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರದಲ್ಲಿ ಸಂಗೀತ ವಿಭಾಗ ಇದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಇಲ್ಲದಾಗಿದೆ. 2017 ಸಾಲಿನಲ್ಲಿ ಆರಂಭವಾದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಪ್ರವೇಶ ಬಯಸಿ ಬಂದಿದ್ದರು. ಸಂಗೀತ ವಿಭಾಗಕ್ಕೆ 10 ವಿದ್ಯಾರ್ಥಿಗಳ ಪ್ರವೇಶ ಬಂದಲ್ಲಿ ವಿಶ್ವ ವಿದ್ಯಾಲಯ ಅವಕಾಶ ನೀಡುತ್ತದೆ. ಹೀಗಾಗಿ ಸಂಗೀತ ಕಲಿಕೆಯಬೇಕೆಂಬ ವಿದ್ಯಾರ್ಥಿಗಳ ಕನಸು ಈಡೇರದಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ ತಿಳಿಸುತ್ತಾರೆ.
ಕಾಲೇಜು ಕಟ್ಟಡ ನಿರ್ಮಿಸಲು 4.50 ಕೋಟಿ ಅನುದಾನ ಬಿಡುಗಡೆಯಾಗಿದೆ. ನಿವೇಶನ ಮಂಜೂರಿಗೆ ಪ್ರಸ್ತಾವನೆ ಕಳಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ. ಗ್ರಂಥಪಾಲಕರನ್ನು ನೇಮಕ ಮಾಡಲಾಗಿದ್ದು, ವಾರದಲ್ಲಿ ಗ್ರಂಥಾಲಯ ಸೌಲಭ್ಯ ಕಲ್ಪಿಸಲಾಗುತ್ತದೆ.
•
ಡಾ| ಶಾಂತಪ್ಪ ಡಂಬಳ್ಳಿ,
ಪ್ರಾಚಾರ್ಯ, ಕನ್ನಡ ವಿಶ್ವ ವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರ.
ನಾಗರಾಜ ತೇಲ್ಕರ್