ದೇವದುರ್ಗ: ಪದವಿ ಪೂರ್ವ ಕಾಲೇಜುಗಳು ಆರಂಭವಾಗಿ ವಾರವಾಗುತ್ತ ಬಂದರೂ ಪಟ್ಟಣದ ಹೊರವಲಯದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಬಾಗಿಲು ತೆರೆಯದ್ದರಿಂದ ಗ್ರಾಮೀಣ ವಿದ್ಯಾರ್ಥಿನಿಯರು ಹಣ ಖರ್ಚು ಮಾಡಿಕೊಂಡು ಮನೆ-ಕಾಲೇಜಿಗೆ ಅಲೆದಾಡುವಂತಾಗಿದೆ.
ಕಳೆದ ವರ್ಷ ವಸತಿ ನಿಲಯದಲ್ಲಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ದ್ವಿತೀಯ ಪಿಯು ವರ್ಗಗಳು ಆರಂಭಗೊಂಡಿವೆ. ಗ್ರಾಮೀಣ ವಿದ್ಯಾರ್ಥಿನಿಯರು ನಿತ್ಯ ಹಣ ಖರ್ಚು ಮಾಡಿಕೊಂಡು ಪಟ್ಟಣಕ್ಕೆ ಕಾಲೇಜಿಗೆ ಆಗಮಿಸುತ್ತಿದ್ದಾರೆ. ವಸತಿ ನಿಲಯಕ್ಕೆ ಹೋದರೆ ಇನ್ನೂ ಯಾರೂ ಬಂದಿಲ್ಲ. ಎಲ್ಲರೂ ಬಂದ ನಂತರ ಬನ್ನಿ ಎಂದು ವಿದ್ಯಾರ್ಥಿನಿಯರಿಗೆ ಹೇಳಿ ಕಳಿಸುತ್ತಿದ್ದಾರೆ ಎನ್ನಲಾಗಿದೆ. ಶಾಲಾ-ಕಾಲೇಜು ಆರಂಭದಲ್ಲೇ ವಸತಿ ನಿಲಯ ಆರಂಭಿಸಬೇಕೆಂಬ ನಿಯಮ ಇಲ್ಲಿನ ಮೇಲ್ವಿಚಾರಕರಿಂದ ಪಾಲನೆ ಆಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಜಾಲಹಳ್ಳಿ ಗ್ರಾಮಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿರುವ ಬಾಲಕರ ವಸತಿ ನಿಲಯ ಪರಿಸ್ಥಿತಿ ಹೇಳತೀರದಾಗಿದೆ. ವಸತಿ ನಿಲಯಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕಾದ ಮೇಲ್ವಿಚಾರಕರೇ ಎಲ್ಲ ವಿದ್ಯಾರ್ಥಿಗಳು ಬಂದ ಬಳಿಕ ಬನ್ನಿ ಎಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.
ಟೆಂಡರ್ ವಿಳಂಬ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 13 ವಸತಿ ನಿಲಯಗಳಿಗೆ ರಾಯಚೂರು ಮೂಲದ ಖಾಸಗಿ ಸಂಸ್ಥೆ ತೊಗರಿಬೆಳೆ, ಕಾರಪುಡಿ, ತರಕಾರಿ, ಮೊಟ್ಟೆ, ಬಾಳೆಹಣ್ಣು ಸೇರಿ ಇತರೆ ಆಹಾರ ಪದಾರ್ಥ ಪೂರೈಸುತ್ತಿದೆ. ಪ್ರಸಕ್ತ ವರ್ಷದ ಟೆಂಡರ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ವಸತಿ ನಿಲಯಗಳನ್ನು ತೆರೆಯಲು ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗಿದೆ. ಅಕ್ಕಿ, ಗೋದಿ ಆಹಾರ ಸರಬರಾಜು ನಿಗಮದಿಂದ ಪೂರೈಸಲಾಗುತ್ತಿದೆ. ಆದರೆ ಇಲ್ಲಿನ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಅನ್ನ ಸಾಂಬಾರ್ ಮಾಡಿ ಯಾದರೂ ವಸತಿ ನಿಲಯ ಆರಂಭಿಸಲು ಮುಂದಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮನೆಯಿಂದ ಕಾಲೇಜಿಗೆ ಅಲೆದಾಡುತ್ತಿದ್ದಾರೆ.
ಪಾಲನೆಯಾಗದ ಆದೇಶ: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನೇತೃತ್ವದಲ್ಲಿ ಜೂ.8ರಂದು ರಾಯಚೂರಿನಲ್ಲಿ ನಡೆದ ಮೇಲ್ವಿಚಾರಕರ ಸಭೆಯಲ್ಲಿ ಶಾಲಾ-ಕಾಲೇಜು ಆರಂಭದಲ್ಲಿ ವಸತಿ ನಿಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಅಲ್ಲದೇ ಆಹಾರ ಸಾಮಗ್ರಿ ಸರಬರಾಜು ವಿಳಂಬವಾದಲ್ಲಿ ಕೈಯಿಂದ ಹಣ ಖರ್ಚು ಮಾಡಿ ವಸತಿ ನಿಲಯ ನಡೆಸಲು ಮೇಲ್ವಿಚಾರಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಹಿರಿಯ ಅಧಿಕಾರಿಗಳ ಆದೇಶಕ್ಕೆ ಇಲ್ಲಿನ ವಸತಿ ನಿಲಯಗಳ ಮೇಲ್ವಚಾರಕರು ಬೆಲೆ ನೀಡುತ್ತಿಲ್ಲ.
ಆಗ್ರಹ: ಶಾಲಾ-ಕಾಲೇಜುಗಳು ಆರಂಭ ವಾದರೂ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಕಲ್ಪಿಸದ ಅಧಿಕಾರಿಗಳು ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಆಗ್ರಹಿಸಿದ್ದಾರೆ.
ವಸತಿ ನಿಲಯಗಳನ್ನು ಆರಂಭಿಸುವಂತೆ ಈಗಾಗಲೇ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬ ಮಾಹಿತಿ ಇದೆ. ಭೇಟಿ ನೀಡಿ ಪರಿಶೀಲಿಸುವೆ.
•
•ಫಕ್ಕೀರಪ್ಪ ಹಾಲವರ,
ತಾಲೂಕು ಸಮಾಜ ಕಲ್ಯಾಣಾಧಿಕಾರಿ