Advertisement

ಬಾಲಕಿಯರ ಹಾಸ್ಟೆಲ್ ಕಟ್ಟಡ ಕಾಮಗಾರಿ ನನೆಗುದಿಗೆ

11:26 AM Aug 30, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದ ಹೊರವಲಯದ ರಾಯಚೂರು ರಸ್ತೆಯ ವಿದ್ಯಾನಗರ ಬಳಿ ನಿರ್ಮಿಸುತ್ತಿರುವ ಬಿಸಿಎಂ ಬಾಲಕಿಯರ ವಸತಿ ನಿಲಯ ಕಾಮಗಾರಿ ನನೆಗುದಿಗೆ ಬಿದ್ದಿದ್ದರೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯ ಕಾಮಗಾರಿ ಮುಗಿದಿದ್ದರೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಪರಿಣಾಮ ಈ ಎರಡೂ ವಸತಿ ನಿಲಯಗಳ ವಿದ್ಯಾರ್ಥಿಗಳು ಸೌಲಭ್ಯ ಕೊರತೆ ಮಧ್ಯೆ ಬಾಡಿಗೆ ಕಟ್ಟಡದಲ್ಲಿ ವಾಸಿಸುವಂತಾಗಿದೆ.

Advertisement

ಉದ್ಘಾಟನೆ ಎಂದು?: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ವಿದ್ಯಾನಗರ ಬಳಿ 3.30 ಕೋಟಿಗೂ ಅಧಿಕ ಅನುದಾನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಕ್‌ ನಂತರ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದಿದೆ. ಕಟ್ಟಡ ಸುಣ್ಣಬಣ್ಣ ಬಳಿಯಲಾಗಿದೆ. ವಿದ್ಯುತ್‌, ಕುಡಿಯುವ ನೀರು ಇತರೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಉದ್ಘಾಟನೆಗೆ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ವಿದ್ಯಾರ್ಥಿಗಳು ಕಟ್ಟಡ ಉದ್ಘಾಟನೆಗೆ ಒತ್ತಡ ಹೇರುತ್ತಿದ್ದರೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸೌಲಭ್ಯ ಕೊರತೆ ಇರುವ ಬಾಡಿಗೆ ಕಟ್ಟಡದಲ್ಲೇ ಕಾಲ ಕಳೆಯುವಂತಾಗಿದೆ.

ಕಾಮಗಾರಿ ನನೆಗುದಿಗೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಕ್‌ ನಂತರ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಮೂರು ವರ್ಷದ ಹಿಂದೆ ಆರಂಭವಾಗಿದೆ. 1.20 ಕೋಟಿ ವೆಚ್ಚದ ಕಾಮಗಾರಿ ಹೊಣೆಯನ್ನು ಲ್ಯಾಂಡ್‌ ಆರ್ಮಿ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಜನಪತ್ರಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಟ್ಟಡ ಅನಾಥವಾಗಿದೆ. ಕಟ್ಟಡದ ಸುತ್ತಲೂ ಜಾಲಿಗಿಡಗಳು ಬೆಳೆದಿವೆ. ಲ್ಯಾಂಡ್‌ ಆರ್ಮಿ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸಂಸ್ಥೆಗೆ ವಹಿಸಿದ ಬಹುತೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ ಎನ್ನಲಾಗಿದೆ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಕ್‌ ನಂತರ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾಲಕಿಯರ ವಸತಿ ನಿಲಯ, ಕೃಷಿ ಮಾರುಕಟ್ಟೆ ಹಿಂಭಾಗದ ಮೈಲಾರಲಿಂಗೇಶ್ವರ ಶಾಲೆ ಪಕ್ಕದ ಬಾಡಿಗೆ ಕಟ್ಟಡದಲ್ಲಿ ಬಾಲಕರ ವಸತಿ ನಿಲಯ ನಡೆಯುತ್ತಿವೆ. ಈ ಎರಡೂ ಕಟ್ಟಡಗಳಲ್ಲಿ ಸೌಲಭ್ಯ ಕೊರತೆ ಇದೆ. ಆಗಾಗ ವಸತಿ ನಿಲಯ ವಿದ್ಯಾರ್ಥಿಗಳು ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಆದರೆ ಅಧಿಕಾರಿಗಳು ಭರವಸೆಯಲ್ಲೇ ಕಾಲದೂಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಲ್ಯಾಂಡ್‌ ಆರ್ಮಿ ಸಂಸ್ಥೆಯಲ್ಲಿ ಸ್ವಲ್ಪ ಸಮಸ್ಯೆಯಿಂದ ವಸತಿ ನಿಲಯ ಕಾಮಗಾರಿ ಆರಂಭಕ್ಕೆ ವಿಳಂಬವಾಗಿದೆ. ವಾರದಲ್ಲಿ ಕೆಲಸ ಪ್ರಾರಂಭಿಸಿ ಎರಡು ತಿಂಗಳಲ್ಲಿ ಉದ್ಘಾಟಿಸಲಾಗುತ್ತದೆ.
ಬಸವರಾಜ ರಾಠೊಡ,
ಲ್ಯಾಂಡ್‌ಆರ್ಮಿ ಎಇಇ

Advertisement

ಮೆಟ್ರಕ್‌ ನಂತರ ಬಾಲಕರ ವಸತಿ ನಿಲಯ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಗೆ ದಿನಾಂಕ ನಿಗದಿಗೆ ಶಾಸಕ ಆಪ್ತ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ.
ದೇವಪ್ಪ ಯರಕಂಚಿ,
ಬಿಸಿಎಂ ಪ್ರಭಾರಿ ವಿಸ್ತೀರ್ಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next