Advertisement

ಗಲಗ ಗ್ರಾಮದ ರಸ್ತೆ ಕೆಸರುಗದ್ದೆ

04:03 PM Nov 25, 2019 | Naveen |

ದೇವದುರ್ಗ: ತಾಲೂಕಿನ ಗಲಗ, ಕಜ್ಜಿಬಂಡಿ ಸೇರಿ ಇತರೆ ಗ್ರಾಮಗಳಲ್ಲಿ ಮೂಲ ಸೌಲಭ್ಯ ಕೊರತೆಯಿಂದ ಗ್ರಾಮಸ್ಥರು ನರಕಯಾತನೆ ಮಧ್ಯೆ ಜೀವನ ಸಾಗಿಸುವಂತಾಗಿದೆ. ಗಲಗ, ಕಜ್ಜಿಬಂಡಿ ಗ್ರಾಮಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿವೆ. ಈ ರಸ್ತೆಗೆ ಮರಂ ಹಾಕುವಲ್ಲಿ ಸಂಬಂಧಿಸಿದ ಗ್ರಾಪಂ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಜನ, ವಾಹನ, ಎತ್ತಿನ ಬಂಡಿಗಳು ಸಂಚರಿಸುವುದು ದುಸ್ತರವಾಗಿದೆ.

Advertisement

ಗಲಗ ಗ್ರಾಮದಿಂದ ಕಜ್ಜಿಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರ್‌ ಕಿತ್ತು ಗುಂಡಿ ಬಿದ್ದಿವೆ. ಬೈಕ್‌, ಇತರೆ ವಾಹನಗಳಿರಲಿ ಇಲ್ಲಿ ನಡೆದುಕೊಂಡು ಹೋಗುವುದು ಕೂಡಾ ದುಸ್ತರವಾಗಿದೆ. ಗುಂಡಿಗಳಿಗೆ ಮರಂ ಹಾಕುವಲ್ಲಿ ಇಲ್ಲವೇ ರಸ್ತೆ ಮರು ಡಾಂಬರೀಕರಣ ಮಾಡುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ರಸ್ತೆಯಲ್ಲೇ ಕೊಳಚೆ ನೀರು: ಗಲಗ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದ ಕೆಲ ವಾರ್ಡ್‌ನಲ್ಲಿ ಚರಂಡಿ ನಿರ್ಮಿಸದ್ದರಿಂದ ಮನೆ ಬಳಕೆ ನೀರು ಸಿಸಿ ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಪಾಚಿಗಟ್ಟಿದೆ. ಈ ರಸ್ತೆ ಮೇಲೆ ನಡೆದಾಡಲೂ ಜನ ಭಯಪಡುವಂತಾಗಿದೆ. ಕಾರಣ ಪಾಚಿಗಟ್ಟಿದ ರಸ್ತೆ ಮೇಲೆ ಸಂಚರಿಸಿದ ಕೆಲವರು ಬಿದ್ದು ಗಾಯಗೊಂಡಿದ್ದಾರೆ. ಇನ್ನು ಸೊಳ್ಳೆ ಕಾಟಕ್ಕೆ ಸುತ್ತಲಿನ ನಿವಾಸಿಗಳು ಬೇಸತ್ತಿದ್ದಾರೆ. ಗ್ರಾಪಂ ಆಡಳಿತ ಫಾಗಿಂಗ್‌ ಮಾಡಲು ಕೂಡ ವಿಫಲವಾಗಿದೆ. ಇನ್ನು ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲೇ ಕೊಳಚೆ ಇದ್ದರೂ ಸ್ವಚ್ಛತೆಗೆ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಗ್ರಾಪಂಗೆ ಸೂಚಿಸುವಲ್ಲಿ ಮತ್ತು ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಎಂದು ಗ್ರಾಮದ ನಿವಾಸಿ ಆದೆಪ್ಪ ದೂರಿದ್ದಾರೆ.

ಹಾಳಾದ ಪ್ರಯಾಣಿಕರ ತಂಗುದಾಣ: ಇನ್ನು ಗ್ರಾಮೀಣ ಭಾಗದ ಪ್ರಯಾಣಿಕರಿಗೆ ನಿರ್ಮಿಸಲಾದ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿವೆ. ಬೊಮ್ಮನಹಳ್ಳಿ, ಗಲಗ, ಭೋಗಿರಾಮನಗುಂಡ, ಸೋಮನಮರಡಿ, ಗಾಣದಾಳ, ಹುಲಿಗುಡ್ಡ, ಕರಡಿಗುಡ್ಡ, ಇಂದಿರಾನಗರ ಸೇರಿ ಇತರೆ ಗ್ರಾಮಗಳಲ್ಲಿರುವ ತಂಗುದಾಣಗಳು ನಿರ್ವಹಣೆ ಕೊತೆಯಿಂದಾಗಿ ಪ್ರಯಾಣಿಕರಿಗೆ ನರಕ ಎನಿಸಿವೆ. ಸುಮಾರು ವರ್ಷಗಳಿಂದ ನಿರ್ಮಿಸಲಾದ ತಂಗುದಾಣಗಳು ಸುಣ್ಣಬಣ್ಣ ಕಂಡಿಲ್ಲ. ತಂಗುದಾಣಗಳ ದುರಸ್ತಿಗೆ, ಸುಣ್ಣಬಣ್ಣ ಬಳಿದು ಸ್ವಚ್ಛತೆ ಕಾಪಾಡಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕೆಂದು ಸೋಮನಮರಡಿ ಗ್ರಾಮಸ್ಥ ರಾಜಶೇಖರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next