ದೇವದುರ್ಗ: ಪ್ರತಿಯೊಬ್ಬರು ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಗಿಡಮರ ಬೆಳೆಸಿ ಪರಿಸರ ರಕ್ಷಿಸಿದರೆ ಆರೋಗ್ಯ ಕೂಡ ಉತ್ತಮವಾಗಿರಲು ಸಹಕಾರಿ ಆಗಲಿದೆ ಎಂದು ಸಿವಿಲ್ ನ್ಯಾಯಾಧೀಶ ರಾಜಶೇಖರ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಾಲಕರ ಪ್ರೌಢಶಾಲೆ ಸೇರಿ ಇತರೆ ಸರಕಾರಿ ಕಚೇರಿಯಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ನೈಸರ್ಗಿಕ ಸಂಪತ್ತು ಕಾಪಾಡುವ ಜವಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಸರಕಾರಿ ಕಚೇರಿ ಶಾಲಾ-ಕಾಲೇಜು ಆವರಣದಲ್ಲಿ ಗಿಡಮರ ಬೆಳೆಸುವುದರಿಂದ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. ಸರಕಾರಿ ಶಾಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕರು ಜೂನ್ ತಿಂಗಳು ಮುಗಿಯವರೆಗೆ ಶಾಲಾ ಆವರಣದಲ್ಲಿ ಸಸಿ ನೆಡಬೇಕು. ಜತೆ ಅವುಗಳ ರಕ್ಷಣೆಗೆ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕು. ಪರಿಸರದಿಂದ ಒಂದು ಉತ್ತಮ ವಾತಾವರಣ ನಿರ್ಮಾಣ ಜತೆ ಪರಿಶುದ್ಧತೆ ಗುಣಗಳು ಬೆಳೆಯುತ್ತವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಎಸ್.ಎಂ. ಹತ್ತಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೆ ಸಸಿ ನೆಡುವಂತೆ ಸೂಚಿಸಲಾಗಿದೆ. ಸಿಆರ್‌ಪಿಗಳಿಗೆ ಅವುಗಳ ಸಂರಕ್ಷಣೆ ನೋಡಿಕೊಳ್ಳುವಂತೆ ಹೇಳಲಾಗಿದೆ. ಪರಿಸರದಲ್ಲಿನ ಗಿಡಮರ ಕಡಿಯುತ್ತಿರುವುದರಿಂದ ಈ ಬಾರಿ ಬೇಸಿಗೆ ಬಿಸಿಲು ವಿಪರೀತವಾಗಿತ್ತು. ಹೀಗಾಗಿ ಪ್ರತಿಯೊಬ್ಬರು ಮನೆ, ಸರಕಾರಿ ಕಚೇರಿ ಶಾಲಾ-ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ ಬಿರಾದಾರ, ಅರಣ್ಯಾಧಿಕಾರಿ ಈರಣ್ಣ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ.ಕುಲಕರ್ಣಿ, ಹನುಮಂತ ಭಂಡಾರಿ, ವೆಂಕಟೇಶ ಡಿ. ಚವ್ಹಾಣ, ಮೌನೇಶ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಕೆ., ಶಿಕ್ಷಣ ಸಂಯೋಜಕ ಚಿದಾನಂದಪ್ಪ ಶಿವಂಗಿ, ಸುರೇಶ ಪಾಟೀಲ, ಬಿಆರ್‌ಪಿ ರಂಗಣ್ಣ ಪಾಟೀಲ, ರಮೇಶ ದಾಸರ, ವಿಶ್ವನಾಥ ಪಾಟೀಲ, ಬಸವರಾಜ ಮಸರಕಲ್, ಸಿಆರ್‌ಪಿ ಸುರೇಶ, ಮುಕ್ತಿಪ್ರಸನ್ನ, ರೇವಣ್ಣಸಿದ್ದಪ್ಪ, ಬಾಬು ಹಡಗಲಿ, ದಾಕ್ಷಾಯಿಣಿ ಇತರರು ಇದ್ದರು.