ದೇವದುರ್ಗ: ರೈತರ ಜಾನುವಾರುಗಳಿಗೆ ಮೇವಿನ ಅಗತ್ಯವಿದೆ. ಹಾಗಾಗಿ ಅರಕೇರಾ ಗ್ರಾಮದಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಅರಕೇರಿ ಹೇಳಿದರು.
ಅರಕೇರಾ ಗ್ರಾಮದಲ್ಲಿ ಕಂದಾಯ ಹಾಗೂ ಪಶು ಇಲಾಖೆಯಿಂದ ಸ್ಥಾಪಿಸಲಾದ ಮೇವಿನ ಬ್ಯಾಂಕ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವರ್ಷ ಕಂದಾಯ ಇಲಾಖೆಯಿಂದ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಲಾಗಿತ್ತು. ಆದರೆ ರೈತರು ಮೇವು ಖರೀದಿ ಮಾಡಲು ಬಾರದೇ ಇರುವುದರಿಂದ ಇದೀಗ ಮೇವು ಜಾನುವಾರುಗಳಿಗೆ ಉಪಯೋಗಕ್ಕೆ ಬಾರದಂತ ಪರಿಸ್ಥಿತಿಗೆ ಬಂದಿದೆ. ಈಗಾಗಲೇ ನಾಲ್ಕು ಟನ್ ಮೇವು ಖರೀದಿಸಲಾಗಿದೆ. ಪ್ರತಿ ಕೆಜಿಗೆ 2 ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದರು.
ರೈತರ ಬೇಡಿಕೆ ಅನುಗುಣವಾಗಿ ಅಗತ್ಯ ಬಿದ್ದಲ್ಲಿ ಮೇವು ಖರೀದಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಲ್ಲಿ ಅವರನ್ನೇ ಹೊಣೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮೇವಿನ ಬ್ಯಾಂಕ್ ಸ್ಥಾಪನೆ ಮಾಡಿದ್ದು, ಇಲ್ಲಿನ ನಾಡಕಚೇರಿ ಸಿಬ್ಬಂದಿ ಬೇಡಿಕೆಯಂತೆ ರೈತರಿಗೆ ಮೇವು ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮಳೆ ವೈಫಲ್ಯದಿಂದ ಬೆಳೆಗಳು ಇಲ್ಲದೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಆದರೆ ಜಿಲ್ಲಾಡಳಿತ ತೊಂದರೆ ಉಂಟು ಆಗದಂತೆ ಅರಕೇರಾ ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಕೆಲ ಹೋಬಳಿಯಲ್ಲಿ ಬೇಡಿಕೆ ಬಂದರೆ ಅಲ್ಲಿಯು ಸ್ಥಾಪಿಸಲು ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಬಸವರಾಜ ಮೀರಸದಾರ್, ಕಂದಾಯ ನಿರೀಕ್ಷಕ ಭೀಮರಾಜ ಮೇಟಿ, ಗ್ರಾಮಲೆಕ್ಕಾಧಿಕಾರಿ ಮಹಿಬೂಬ್, ಮಲ್ಲಿಕಾರ್ಜುನ, ಡಾ|ಪ್ರಕಾಶ, ಅಭಿಷೇಕ ರೆಡ್ಡಿ, ಉಸ್ಮಾನ್ ನಾಗಡದಿನ್ನಿ, ಅಲ್ಲಾಹುದ್ದೀನ್ ಇದ್ದರು.
ಪ್ರಾರಂಭವಾದ ದಿನವೇ ರೈತರು 100 ಕೆಜಿ ಮೇವು ಖರೀದಿಸಿದ್ದಾರೆ. ಕೆಲ ಹೋಬಳಿ ವ್ಯಾಪ್ತಿ ಬೇಡಿಕೆ ಬಂದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಸ್ಥಾಪನೆ ಮಾಡಲಾಗುತ್ತದೆ. ಕುಡಿಯುರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಕ್ರಮಕೈಗೊಳ್ಳಲಾಗಿದೆ.
•
ಎಸ್.ಎಂ. ಅರಕೇರಿ, ತಹಶೀಲ್ದಾರ್