ದೇವದುರ್ಗ: ಕೋವಿಡ್ ವೈರಸ್ ತಡೆಗಟ್ಟಲು ರಾಜ್ಯ ಸರಕಾರದ ಆದೇಶ ಮೇರೆಗೆ ಗುರುವಾರ ಮಾಸ್ಕ್ ದಿನ ಆಚರಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ಮಾಸ್ಕ್ ಧರಸದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ. ಆದರೆ ಪಟ್ಟಣದಲ್ಲಿ ಶನಿವಾರ ನಡೆದ ಸಂತೆಯಲ್ಲಿ ಮಾಸ್ಕ್ ಮಾಯವಾಗಿತ್ತು.
ವ್ಯಾಪಾರ ವಹಿವಾಟ ಜೋರಾಗಿ ನಡೆದಿತ್ತು. ಸಂತೆಯಲ್ಲಿ ಎಲ್ಲೆಂದರಲ್ಲಿ ಪೊಲೀಸ್ ಸಿಬ್ಬಂದಿ ಕಂಡು ಬಂದರು. ಆದರೆ ದಂಡ ನಾಮಕವಾಸ್ತೆ ಎಂಬಂತೆ ಕಂಡು ಬಂತು. ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪಟ್ಟಣದಲ್ಲಿ 200 ರೂ., ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂದು ಪುರಸಭೆಯಿಂದ ಟಂಟಂ ವಾಹನ ಮೂಲಕ ವಾರ್ಡ್‌ಗಳಲ್ಲಿ ಜಾಗೃತಿ ಸಹ ಮೂಡಿಸಲಾಗಿದೆ. ಆದರೆ ಸಂತೆಯಲ್ಲಿ ಇದ್ಯಾವುದು ಲೆಕ್ಕಕ್ಕೆ ಇಲ್ಲದಂತಾಗಿತ್ತು.
ತರಕಾರಿ ಮಾರಲು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ನೂರಾರು ರೈತರು ಮಾಸ್ಕ್ ಧರಿಸರಲಿಲ್ಲ. ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ದಂಡ ಎಂಬುದು ಜಾಗೃತಿಗೆ ಸಿಮೀತವಾಗಿದೆ. ತಾಲೂಕಿನಲ್ಲಿ ಈಗಾಗಾಲೇ 300ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮಧ್ಯೆ ವಾರದ ಸಂತೆಯಲ್ಲೂ ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟ ನಡೆದಿದೆ. ಇದರಿಂದ ಜನರಿಗೆ ಕೋವಿಡ್ ವೈರಸ್ ಭಯ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಕೋವಿಡ್ ವೈರಸ್ ತಡೆಗಟ್ಟಲು ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಜನರಲ್ಲಿ ತಿಳಿವಳಿಕೆ ಬರಬೇಕಾಗಿದೆ. ಕೆಲ ಜನರಿಗೆ ದಂಡ ಹಾಕಲಾಗಿದೆ.
ಮಧುರಾಜ ಯಾಳಗಿ,
ತಹಶೀಲ್ದಾರ್