Advertisement

ರಾಮದುರ್ಗದಲ್ಲಿ ಪ್ರಾಚೀನ ಅವಶೇಷಗಳ ಪತ್ತೆ

07:44 PM Mar 12, 2020 | Naveen |

ದೇವದುರ್ಗ: ತಾಲೂಕಿನ ರಾಮದುರ್ಗ ಗ್ರಾಮದಲ್ಲಿ ಪ್ರಾಚೀನ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ| ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

Advertisement

ದೇವದುರ್ಗ ತಾಲೂಕು ಕೇಂದ್ರದಿಂದ 29 ಕಿ.ಮೀ. ಅಂತರದಲ್ಲಿ ರಾಮದುರ್ಗ ಗ್ರಾಮವಿದೆ. ಇಲ್ಲಿ ರಾಮಲಿಂಗೇಶ್ವರ ಗುಡ್ಡ, ಅಗಸರಗುಡ್ಡ, ದುರುಗಮ್ಮ ಗುಡ್ಡಗಳು, ನಾಲ್ಕು ಹಳ್ಳಗಳಿವೆ. ರಾಮಲಿಂಗೇಶ್ವರ ಗುಡ್ಡದಲ್ಲಿ ಕೋಟೆ, ಹುಡೇವು, ಸಿಡಿಲು ಬಾವಿಗಳಿವೆ. ಈ ಗ್ರಾಮದಲ್ಲಿ ಬೆಳುಡೊಣೆ ಸಿದ್ದೇಶ್ವರ, ವೀರಭದ್ರ, ಕೇಶವರಾಯ, ರಾಮಲಿಂಗೇಶ್ವರ “ಇಂಡೋಸಾರ್ಸೆನಿಕ್‌ ಶೈಲಿ’, ಬಸವಣ್ಣ, ಬೇಡರ ಕಣ್ಣಪ್ಪ, ದುರ್ಗಮ್ಮ ದೇವಾಲಯಗಳಿವೆ. ಹಾಗೆಯೇ ಕೊಳದ ಹನುಮಪ್ಪ, ಮಡಿಹನುಮಪ್ಪ, ಕಸಬೆ ಹನುಮಪ್ಪ, ತಿಪ್ಪಾಪುರದ ಹನುಮಪ್ಪ, ಗೋಸಿಬಾವಿ “ಆರ್ಯರ ಬಾವಿ’ ಹನುಮಪ್ಪ, ಹಾಳೂರು ಹನುಮಪ್ಪ, ರಾಮದುರ್ಗದ ಹನುಮಪ್ಪ ಎಂಬ ಹೆಸರಿನ ಏಳು ಹನುಮಪ್ಪನ ಮಂದಿರಗಳಿವೆ.

ಇಲ್ಲಿ ಐದು ವೀರಗಲ್ಲುಗಳು, ಹಲವು ನಾಗಶಿಲ್ಪ, ಈಶ್ವರಲಿಂಗ ಮೊದಲಾದವುಗಳಿವೆ. ರಾಮಲಿಂಗೇಶ್ವರ ದೇವಾಲಯದ ಮುಂಭಾಗದ ಬಂಡೆಗಲ್ಲಿನಲ್ಲಿ ಕ್ರಿ.ಶ. 1616ರ ಶಾಸನವಿದೆ. ಕಸಬೆ ಹನುಮಪ್ಪ ದೇವಾಲಯದ ಮುಂದೆ ತುಂಡರಿಸಲ್ಪಟ್ಟ ಕ್ರಿ.ಶ. 11ನೇ ಶತಮಾನದ ಕಪ್ಪು ಶಿಲೆಯಲ್ಲಿನ ಶಾಸನವು ಪತ್ತೆಯಾಗಿದೆ. ಇದರಲ್ಲಿ ಕಲ್ಯಾಣ ಚಾಳುಕ್ಯ ಅರಸ ತ್ರಿಭುವನ ಮಲ್ಲದೇವನ ಆರನೇ ವಿಕ್ರಮಾದಿತ್ಯ, ಕ್ರಿ.ಶ. 1076-1126 ಬಗ್ಗೆ ಉಲ್ಲೇಖೀಸುತ್ತದೆ. ಈ ಶಾಸನದಲ್ಲಿ ಅರಸನು ಕಲ್ಯಾಣಪುರದ ನೆಲೆವಿಡಿನಿಂದ ಪ್ರಸ್ತುತ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕು ಕೇಂದ್ರ ರಾಜ್ಯಭಾರ ಮಾಡುತ್ತಿರುವಾಗ ಇಲ್ಲಿನ ಮಹಾಜನರಿಗೆ ದತ್ತಿ ನೀಡಿದ್ದನು.

ಹಾಗೆಯೇ ಶಾಸನ ಮುಂದುವರಿದು ಸೆಟ್ಟರು, ಗಳೆ, ಗದ್ದೆ ಮೊದಲಾದವುಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಇಲ್ಲಿನ ಅವಶೇಷಗಳನ್ನು ಶೋಧಿಸುವ ಸಂದರ್ಭದಲ್ಲಿ ಪರಪ್ಪ ಭಂಡಾರಿ ಹಂಚಿನಾಳ, ರಾಮದುರ್ಗದ ವೆಂಕೋಬ ನಾಯಕ ಮೊದಲಾದವರು ನೆರವಾಗಿದ್ದಾರೆ ಎಂದು ಸಂಶೋಧಕ ಡಾ| ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next