Advertisement

ಬಾಲ್ಯ ವಿವಾಹ-ಬಾಲಕಾರ್ಮಿಕ ಪದ್ಧತಿ ತಡೆಗೆ ಸಹಕರಿಸಿ: ಜಯಶ್ರೀ

03:20 PM Nov 24, 2019 | Naveen |

ದೇವದುರ್ಗ: ಸಮಾಜಕ್ಕೆ ಪಿಡುಗಾದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಗೆ ಕಡಿವಾಣ ಹಾಕಲು ಸಮುದಾಯದ ಸಹಕಾರ ಅಗತ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯೆ ಡಾ| ಜಯಶ್ರೀ ವಿನಂತಿಸಿದರು.

Advertisement

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 30ನೇ ವರ್ಷಾಚರಣೆ ಪ್ರಯುಕ್ತ ಪಟ್ಟಣದ ಡಾನ್‌ ಬಾಸ್ಕೋ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಬೆಳಗುಸಿರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ಹೋಗಲಾಡಿಸಲು ಪಾಲಕರು ಜಾಗೃತರಾಗಬೇಕು. ಪ್ರತಿಯೊಂದು ಮಗುವಿಗೆ ಶಿಕ್ಷಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಭಾಗದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಹೊಲಗದ್ದೆಗಳಿಗೆ ಕೂಲಿ ಕೆಲಸಕ್ಕೆ ಕಳಿಸಲಾಗುತ್ತಿದ್ದು, ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಹಕ್ಕು, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ತಡೆ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಿದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕಾದ ಪಾಲಕರೇ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸುತ್ತಿರುವುದು ದುರಂತ ಎಂದರು.

14 ವರ್ಷದೊಳಗಿನ ಮಕ್ಕಳನ್ನು ಕಾರ್ಖಾನೆ, ಅಂಗಡಿಗಳಿಗೆ, ಹೊಲಗದ್ದೆಗಳಲ್ಲಿ ದುಡಿಸಿಕೊಳ್ಳುವುದು ಮತ್ತು ದುಡಿಮೆ ಕಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೇ 18 ವರ್ಷದೊಳಗೆ ಹೆಣ್ಣುಮಕ್ಕಳಿಗೆ ಮತ್ತು 21 ವರ್ಷದೊಳಗಿನ ಗಂಡುಮಕ್ಕಳಿಗೆ ಮದುವೆ ಮಾಡುವುದು ಕೂಡಾ ಅಪರಾಧ. ಇಂತಹ ಕೃತ್ಯಗಳು ನಡೆದಲ್ಲಿ ಪ್ರಜ್ಞಾವಂತರು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಡೆಯುವ ಕೆಲಸ ಮಾಡಬೇಕು ಎಂದರು.

Advertisement

ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಗುರುಪ್ರಸಾದ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಬಾಲಕಾರ್ಮಿಕ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿ ತಡೆಗೆ ಪಾಲಕರಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು ಎಂದರು.

ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಕಾಧಿರಿ ಮಂಜುನಾಥ ರೆಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ, ಜಿಲ್ಲಾ ಮಕ್ಕಳ ಹಕ್ಕುಗಳ ಕ್ಲಬ್‌ ಒಕ್ಕೂಟ ರಾಯಚೂರು ವತಿಯಿಂದಾ ರಂಜಿತಾ ಸೇರಿ ಇತರರಿಗೆ ಚಾಂಪಿಯನ್‌ ಆಫ್‌ ಚೈಲ್ಡ್‌ ರೈಟ್ಸ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಾಗೃತಿ ಜಾಥಾ: ಬೆಳಗುಸಿರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಪಟ್ಟಣದ ಜಹಿರುದ್ದೀನ್‌ ವೃತ್ತದಲ್ಲಿ ತಾಪಂ ಇಒ ಹಾಲಸಿದ್ದಪ್ಪ ಪೂಜಾರಿ ಜಾಥಾಕ್ಕೆ ಚಾಲನೆ ನೀಡಿದರು. ವಿವಿಧ ಸರಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಾಥಾದುದ್ದಕ್ಕೂ ಮಕ್ಕಳನ್ನು ಶಾಲೆಗೆ ಕಳಿಸಬೇಕು, ಕೂಲಿಗೆ ಕಳಿಸಬೇಡಿ, ಬಾಲ್ಯ ವಿವಾಹ ಮಾಡಬೇಡಿ ಎಂದು ಘೋಷಣೆ ಕೂಗಿದರು. ಸಿಡಿಪಿಒ ಬಿ.ಎಸ್‌. ಹೊಸಮನಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ, ಫಾ| ಕುರಿಯಾಕೋಸ್‌, ಫಾ.ನೀತಿನ್‌ ಜಾರ್ಜ್‌, ಬಸವರಾಜ ಕೊಪ್ಪರ, ಸಿದ್ದಲಿಂಗಪ್ಪ ಕಾಕರಗಲ್‌ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next