ದೇವದುರ್ಗ: ರಾಜ್ಯದಲ್ಲಿ ಲಾಕ್‌ಡೌನ್ ಸ್ವಲ್ಪ ಮಟ್ಟಿಗೆ ಸಡಿಲಿಕೆಯಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ತಾಲೂಕಿನಲ್ಲಿ ಎರಡು ಕೋವಿಡ್ ಪಾಸಿಟವ್ ಪ್ರಕರಣ ಪತ್ತೆಯಾಗಿದ್ದರೂ ಸಾರ್ವಜನಿಕರಲ್ಲಿ ಆತಂಕವೇ ಇಲ್ಲವೇನೊ ಎನ್ನುವಂತಾಗಿದೆ ಪರಿಸ್ಥಿತಿ. ಎಂದಿನಂತೆ ಗುಂಪು ಗುಂಪಾಗಿ ಜನರ ಓಡಾಟದಿಂದ ಮತ್ತಷ್ಟು ಆತಂಕ ಮನೆ ಮಾಡಿದೆ.
ಮಸರಕಲ್ ಗ್ರಾಮದ ಹೊರವಲಯದಲ್ಲಿರುವ ವಸತಿ ನಿಲಯ ಕ್ವಾರಂಟೈನ್‌ನಲ್ಲಿದ್ದ ಇಬ್ಬರಲ್ಲಿ ಕೋವಿಡ್ ಪಾಸಿಟವ್ ಕಂಡು ಬಂದಿದ್ದರಿಂದ ಇನ್ನುಳಿದವರಲ್ಲಿ ಆತಂಕ ಮೂಡಿಸಿದೆ. ಸಾಮಾಜಿಕ ಅಂತರ ಪಾಲನೆಯಾಗದೇ ಇರುವುದು ಅಧಿಕಾರಿಗಳಿಗೆ ಬೇಸರ ತರಿಸಿದೆ. ಕಡ್ಡಾಯವಾಗಿ ಮಾಸ್ಕ್, ಕರವಸ್ತ್ರ ಧರಿಸಬೇಕು ಎನ್ನುವ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ. ಬ್ಯಾಂಕ್, ಸರಕಾರಿ ಕಚೇರಿ, ಹೋಟೆಲ್, ಆಟೋಗಳಲ್ಲಿ, ರಸ್ತೆ ಬದಿ ವ್ಯಾಪಾರ ವಹಿವಾಟಿನಲ್ಲಿ ಸಾಮಾಜಿಕ ಅಂತರವೇ ಪಾಲನೆಯಾಗುತ್ತಿಲ್ಲ. ಒಬ್ಬರಿಗೂಬ್ಬರು ಹತ್ತಿರದಲ್ಲಿ ನಿಂತುಕೊಂಡು ವ್ಯಾಪಾರ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಕಳೆದ 50 ದಿನಗಳಿಂದ ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಇದ್ದ ತಾಲೂಕಿನ ಜನರಿಗೆ ಕೋವಿಡ್ ಪಾಸಿಟವ್ ಆಘಾತ ಉಂಟು ಮಾಡಿದೆ. 50 ವರ್ಷ ಮೇಲ್ಪಟಿರುವ ವೃದ್ಧರು, 10 ವರ್ಷದೊಳಗಿನ ಮಕ್ಕಳು ಮನೆಯಿಂದ ಹೊರಗಡೆ ಬರದಂತೆ ಎಚ್ಚರ ವಹಿಸಬೇಕು ಎಂಬ ಜಿಲ್ಲಾಡಳಿತದ ಸೂಚನೆಯನ್ನು ಬಹುತೇಕರು ಪಾಲಿಸುತ್ತಿಲ್ಲ. ಬೀಡಿ, ಸಿಗರೇಟ್ ಸೇದುತ್ತ ಒಬ್ಬರಿಗೊಬ್ಬರು ಮಾತಾನಾಡುವ ದೃಶ್ಯಗಳು ಕಾಣ ಸಿಗುತ್ತಿವೆ. ತಾಲೂಕು ಮಟ್ಟದ ಅಧಿಕಾರಿಗಳು ಕೋವಿಡ್ ವೈರಸ್ ತಡೆಗಟ್ಟಲು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್, ಕರವಸ್ತ್ರ ಧರಸದ ಜನರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿ ಬಂದಿದೆ.
ತಾಲೂಕಿನಲ್ಲಿ ಎರಡು ಕೋವಿಡ್ ಪಾಸಿಟವ್ ಪ್ರಕರಣ ಪತ್ತೆಯಾಗಿವೆ. ಕ್ವಾರಂಟೈನ್ ಕೇಂದ್ರದಲ್ಲಿ ಬಿಗಿ ಕ್ರಮವಹಿಸಲಾಗಿದೆ. ಕೋವಿಡ್ ರೋಗ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಮಾಸ್ಕ್, ಕರವಸ್ತ್ರ ಧರಿಸುವಂತೆ ಆದೇಶಿಸಲಾಗಿದೆ.
ಮಧುರಾಜ ಯಾಳಗಿ,
ತಹಶೀಲ್ದಾರ್