ದೇವದುರ್ಗ: ಅನುದಾನ ಬಿಡುಗಡೆ ವಿಳಂಬ, ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಪಟ್ಟಣದಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅವಧಿ ಮುಗಿದರೂ ಪೂರ್ಣಗೊಂಡಿಲ್ಲ.
ಪಟ್ಟಣದಲ್ಲಿ ಸಮುದಾಯ ಭವನ, ಗ್ರಂಥಾಲಯ ಕಟ್ಟಡ, ಬಸ್ ನಿಲ್ದಾಣ ಸೇರಿ ವಿವಿಧ ಕಾಮಗಾರಿ ನಡೆದಿವೆ. ಆದರೆ ಗುತ್ತಿಗೆ ನಿಯಮಾವಳಿಯಲ್ಲಿ ನಿಗದಿಪಡಿಸಿದ ಅವಧಿ ಮುಗಿದರೂ ಕಾಮಗಾರಿ ಮುಗಿಯುತ್ತಿಲ್ಲ.
ಬಂಜಾರ ಭವನ: ಪಟ್ಟಣದ ಹೊರವಲಯದ ಯಲ್ಲಾಲಿಂಗ ಕಾಲೋನಿಯಲ್ಲಿ ಬಂಜಾರ ಅಭಿವೃದ್ದಿ ನಿಗಮದ 1 ಕೋಟಿ 50 ಲಕ್ಷ ಅನುದಾನದಲ್ಲಿ 2016ರಲ್ಲೇ ಸಮುದಾಯ ಭವನ ಕಾಮಗಾರಿ ಪ್ರಾರಂಭವಾಗಿದೆ. ಮೂರು ವರ್ಷವಾದರೂ ಕಾಮಗಾರಿ ಮುಗಿದಿಲ್ಲ. ಅಧಿಕಾರಿಗಳು ಇಂದು, ನಾಳೆ ಮುಗಿಸುವುದಾಗಿ ಹೇಳುತ್ತ ದಿನ ದೂಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಸಮುದಾಯದ ಮುಖಂಡರು ಬೇಗನೆ ಕಾಮಗಾರಿ ಮುಗಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಗ್ರಂಥಾಲಯ ಕಾಮಗಾರಿ ಸ್ಥಗಿತ: ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಗ್ರಂಥಾಲಯ ಕಟ್ಟಡ ಕಾಮಗಾರಿ ಆರೇಳು ತಿಂಗಳಿನಿಂದ ಸ್ಥಗಿತಗೊಂಡಿದೆ. ನಿರ್ಮಿತಿ ಕೇಂದ್ರ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಕಾಲೇಜು ಪ್ರಾಚಾರ್ಯರು ಹಾಗೂ ನಿರ್ಮಿತಿ ಕೇಂದ್ರ ಅಧಿಕಾರಿಗಳ ಮಧ್ಯ ಹೊಂದಾಣಿಕೆ ಕೊರತೆಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಜಗಜೀವನರಾಮ್ ಭವನ: ಪಟ್ಟಣದ ಹೊರವಲಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆವರಣದಲ್ಲಿ 1 ಕೋಟಿ 20 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಡಾ| ಬಾಬು ಜಗಜೀವನರಾಮ್ ಸಮುದಾಯ ಭವನ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಮೊದಲನೇ ಹಂತದ ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಇದೀಗ ಕಾಮಗಾರಿ ನಿಲ್ಲಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಆಂಜನೇಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಅನುದಾನ ಬಿಡುಗಡೆ ವಿಳಂಬವಾಗಿದ್ದರಿಂದ ಕಾಮಗಾರಿ ತಡವಾಗಿ ಆರಂಭವಾಗಿದೆ. ಕೆಲಸ ಪ್ರಾರಂಭವಾಗಿ ಆರೇಳು ತಿಂಗಳಾಗಿದೆ. ಆದರೆ ಗುತ್ತಿಗೆದಾರರಿಗೆ ಮೊದಲನೇ ಹಂತದ ಅನುದಾನ ಇಲ್ಲಿವರೆಗೆ ಬಾರದ್ದರಿಂದ ಈ ಕಾಮಗಾರಿ ಕೂಡ ಸ್ಥಗಿತಗೊಳಿಸಲಾಗಿದೆ.
ಬಸ್ ನಿಲ್ದಾಣ: ಪಟ್ಟಣದಲ್ಲಿ 1 ಕೋಟಿ 72 ಲಕ್ಷ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ನಡೆದಿದೆ. ಅವಧಿ ಮುಗಿದು ವರ್ಷವಾದರೂ ಉರುಳಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. 2018ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರಿಂದ ಪ್ರಯಾಣಿಕರು ನಿತ್ಯ ಗೋಳಾಡುವಂತಾಗಿದೆ. ಈಗಾಗಲೇ ಕೆಲ ಸಂಘಟನೆಗಳ ಮುಖಂಡರು ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸದ್ದರಿಂದ ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ. ಸಾರಿಗೆ ಸಚಿವರಾಗಿದ್ದ ಎಚ್.ಎಂ. ರೇವಣ್ಣ ಈ ಹಿಂದೆ ಪಟ್ಟಣಕ್ಕೆ ಆಗಮಿಸಿದಾಗ ಕಾಮಗಾರಿ ಪರಿಶೀಲಿಸಿದ್ದರು. ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದಕ್ಕೆ ಗುತ್ತಿಗೆದಾರರಿಗೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಮುಖಂಡರ ಆಗ್ರಹ: ಸಮುದಾಯ ಭವನಗಳ ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗಿವೆ. ಗ್ರಂಥಾಲಯ ಕಾಮಗಾರಿ ಸ್ಥಗಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕೆಂದು ದಾನಪ್ಪ ರಾಠೊಡ, ಶಿವಪ್ಪ, ವಿದ್ಯಾರ್ಥಿ ಹರ್ಷವರ್ಧನ ಆಗ್ರಹಿಸಿದ್ದಾರೆ.