ದೇವದುರ್ಗ: ಸ್ಥಳೀಯ ಪುರಸಭೆ ವ್ಯಾಪ್ತಿಯ ಕೆಲ ದೊಡ್ಡಿಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನವೇ ಇಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ದೊಡ್ಡಿಗಳಿವೆ. ಒಂದೊಂದು ದೊಡ್ಡಿಯಲ್ಲಿ ಕನಿಷ್ಠ 400ರಿಂದ 500 ಜನ ವಾಸಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಜಮೀನುಗಳಲ್ಲೇ ವಾಸಿಸುತ್ತಿದ್ದಾರೆ. ಯಾರಾದರೂ ಮೃತಪಟ್ಟರೆ ಜಮೀನುಗಳಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ.
ಸ್ಮಶಾನ ಎಲ್ಲೆಲ್ಲಿ ಇಲ್ಲ: ಪುರಸಭೆ ವ್ಯಾಪ್ತಿಯ ತಳವಾರದೊಡ್ಡಿ, ಮರಿಗೆಮ್ಮ ದಿಬ್ಬಿ ತಾಂಡಾ, ಗುಂಡುಲೇರದೊಡ್ಡಿ, ಕ್ಯಾದಿಗೇರದೊಡ್ಡಿ, ಮಟ್ಟಲೇರದೊಡ್ಡ, ಕಾಳೇರದೊಡ್ಡಿ, ಜಕ್ಕಲೇರದೊಡ್ಡಿ ಸೇರಿ ಇತರೆ ದೊಡ್ಡಿಗಳು ಪಟ್ಟಣದಿಂದ ಆರೇಳು ಕಿ.ಮೀ. ಅಂತರದಲ್ಲಿವೆ. ದೊಡ್ಡಿಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೆ ಒಂದೆರಡು ಎಕರೆ ಜಮೀನಿದೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಜಮೀನಿ ನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.
ಎರಡೇ ಖಬರಸ್ಥಾನ: ಇನ್ನು ದೇವದುರ್ಗ ಪಟ್ಟಣದಲ್ಲಿ 10 ಸಾವಿರಕ್ಕೂ ಅಧಿಕ ಮುಸ್ಲಿಮರಿದ್ದಾರೆ. ಪಟ್ಟಣದಲ್ಲಿ ಎರಡು ಖಬರಸ್ಥಾನ ಇವೆ. ಪೊಲೀಸ್ ಠಾಣೆ ಹತ್ತಿರ, ಗೌರಂಪೇಟೆ ಸೇರಿ ಎರಡು ಖಬರಸ್ಥಾನ ಇವೆ. ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಬಸ ನಿಲ್ದಾಣ, ದರ್ಬಾರ್ ಹತ್ತಿರ ಇರುವಂತ ಮುಸ್ಲಿಮರು ಮೃತಪಟ್ಟರೆ ಒಂದೂವರೆ ಕಿ.ಮೀ. ನಡೆದುಕೊಂಡು ಖಬರಸ್ಥಾನಕ್ಕೆ ಬರಬೇಕು. ಗೌರಂಪೇಟೆ ವಾರ್ಡ್‌ನಲ್ಲಿ ಸಮಸ್ಯೆ ಇಲ್ಲ. ಖಬರಸ್ಥಾನ ಒಳಗೆ ಬೆಳೆದ ನಿಂತ ಜಾಲಿಗಿಡ ಗಿಡಗಂಟೆಗಳ ಸ್ವಚ್ಛತೆಗೆ ಪುರಸಭೆ ಗಮನಹರಿಸಬೇಕಿದೆ.
ಸ್ಮಶಾನ ಒತ್ತುವರಿ: ಬೂದಿಬಸವೇಶ್ವರ ಮಠದಲ್ಲಿರುವ ಮೇಲ್ವರ್ಗದವರಿಗೆ ಸೇರಿದ ಸ್ಮಶಾನ ಒತ್ತುವರಿಗೆ ಆಗಿದೆ ಎನ್ನಲಾಗುತ್ತಿದೆ. ಒಳಗೆ ಜಾಲಿಗಿಡಗಳು ಬೆಳೆದ ಅವ್ಯವಸ್ಥೆ ಆಗರವಾಗಿದೆ. ಗೌತಮ ವಾರ್ಡ್‌ನಲ್ಲಿರುವ ಸ್ಮಶಾನ ದಿನೇದಿನೇ ಒತ್ತುವರಿಗೆ ಆಗುತ್ತಿದೆ. ಶವ ಸುಟ್ಟು ಹಾಕುವ ಸೌಲಭ್ಯ ಕಲ್ಪಿಸಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ತಿಮ್ಮಪ್ಪನಕರೆ, ಮಲ್ಲಯ್ಯ ಚರ್ಮಿ, ಸಿಪತಗೇರಾ ಸೇರಿ ಇತರೆಡೆ ಸ್ಮಶಾನಗಳಿವೆ. ಇಲ್ಲಿ ಹಿಂದುಳಿದ ಜನಾಂಗ ಇತರೆ ಸಮುದಾಯಗಳ ಶವ ಸಂಸ್ಕಾರ ಮಾಡಲಾಗುತ್ತದೆ. ಇಲ್ಲಿನ ಸ್ಮಶಾನಗಳು ಅವ್ಯವಸ್ಥೆ ಆಗರವಾಗಿದ್ದು, ಸ್ವಚ್ಛತೆ ಗಗನ ಕುಸುಮವಾಗಿದೆ.
ದೊಡ್ಡಿಗಳಲ್ಲಿ ಸ್ಮಶಾನಗಳು ಇಲ್ಲ. ಯಾರಾದರೂ ಮೃತಪಟ್ಟರೆ
ಜಮೀನುಗಳಲ್ಲೇ ಶವ ಸಂಸ್ಕಾರ ಮಾಡಬೇಕಿದೆ. ಸ್ಮಶಾನಕ್ಕೆ ಜಾಗೆ ಒದಗಿಸುವಂತೆ ಪುರಸಭೆಗೆ ಮನವಿ ಮಾಡಲಾಗಿದೆ.
ಶಿವಪ್ಪ, ರಾಮಯ್ಯ,
ದೊಡ್ಡಿ ನಿವಾಸಿಗಳು.
ನಾಗರಾಜ ತೇಲ್ಕರ್