ನಾಗರಾಜ ತೇಲ್ಕರ್
ದೇವದುರ್ಗ: ಮುಂಗಾರು ಮಳೆ ಕೊರತೆ ನಡುವೆಯೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ತಾಲೂಕಿನ ಅಲ್ಲಲ್ಲಿ ರೈತರು ಬಿತ್ತನೆ ಮಾಡುತ್ತಿರುವುದು ಕಂಡುಬರುತ್ತಿದೆ. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿಯಲ್ಲಿ ತೊಡಗಿದ್ದಾರೆ.
ತಾಲೂಕಿನ ಅರಕೇರಾ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮೋಡ ಕವಿದ ವಾತಾವರಣವಿದೆ. ಬಿತ್ತನೆ ಕಾರ್ಯ ಮುಗಿಸಿದ ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ. ಸಾಸ್ವಿಗೇರಾ ಸೀಮಾಂತರದಲ್ಲಿ ಕಳೆದ ಎರಡು ದಿನಗಳಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭಾಗದ ಬಹುತೇಕ ರೈತರು ಸಜ್ಜೆ ಬಿತ್ತನೆ ಮಾಡಿದ್ದಾರೆ.
ಎಲ್ಲೆಲ್ಲಿ ಎಷ್ಟು: ದೇವದುರ್ಗ ಪಟ್ಟಣ ವ್ಯಾಪ್ತಿಯಲ್ಲಿ 30 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಜಾಲಹಳ್ಳಿ 30 ಹೆಕ್ಟೇರ್, ಅರಕೇರಾ 15 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಗಬ್ಬೂರು ಹೋಬಳಿಯಲ್ಲಿ ಹೆಸರು ಬಿತ್ತನೆ ಆಗಿಲ್ಲ. ದೇವದುರ್ಗ ಪಟ್ಟಣ ವ್ಯಾಪ್ತಿಯಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಜಾಲಹಳ್ಳಿ 250 ಹೆಕ್ಟೇರ್, ಅರಕೇರಾ 125 ಹೆಕ್ಟೇರ್, ಗಬ್ಬೂರು 50 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬಿತ್ತಿದ್ದಾರೆ. ಅರಕೇರಾ ನೀರಾವರಿ ಪ್ರದೇಶದಲ್ಲಿ 50 ಹೆಕ್ಟೇರ್ ಹತ್ತಿ, ಜಾಲಹಳ್ಳಿ ಹೋಬಳಿಯಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ದೇವದುರ್ಗ ಪಟ್ಟಣ ವ್ಯಾಪ್ತಿಯ ಖುಷ್ಕಿ ಪ್ರದೇಶದಲ್ಲಿ ಸಜ್ಜೆ 270 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಮಾಡಲಾಗಿದೆ. ಗಬ್ಬೂರು ಹೋಬಳಿಯ ಖುಷ್ಕಿ 250 ಹೆಕ್ಟೇರ್, ನೀರಾವರಿ 20 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಬಿತ್ತನೆ ಮಾಡಲಾಗಿದೆ. ಅರಕೇರಾ ಹೋಬಳಿಯಲ್ಲಿ ನೀರಾವರಿ 51 ಹೆಕ್ಟೇರ್ ಪ್ರದೇಶ, ಖುಷ್ಕಿ 285 ಪ್ರದೇಶದಲ್ಲಿ ಸಜ್ಜೆ ಬಿತ್ತಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ನೀರಿನ ಅಭಾವ ಹಿನ್ನೆಲೆ ತಾಲೂಕಿನಾದ್ಯಂತ ಭತ್ತ ಬಿತ್ತನೆ ವಿಳಂಬವಾಗುವ ಸಾಧ್ಯತೆ ಇದ್ದು, ಕೊಳವೆಬಾವಿ ಹೊಂದಿದ ದರೈತರು ಭತ್ತ ಬಿತ್ತನೆ ಮಾಡಿದ್ದಾರೆನ್ನಲಾಗಿದೆ.
ಬೀಜ ಖರೀದಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಜಾಲಹಳ್ಳಿ, ಅರಕೇರಾ, ಗಬ್ಬೂರು ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಖರೀದಿ ಪ್ರಕ್ರಿಯೆ ಜೋರಾಗಿ ನಡೆದಿದೆ. ಕಳೆದ ತಿಂಗಳ ಆಗಾಗ ಬಿಡದೇ ಸುರಿದ ಮಳೆಯಿಂದಾಗಿ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ. ಅಲ್ಲಲ್ಲಿ ಸ್ವಲ್ಪ ಜನ ರೈತರು ಹೊಲ ಹದ ಮಾಡಿಕೊಂಡಿದ್ದು, ಇನ್ನೂ ಸ್ವಲ್ಪ ಮಳೆ ಸುರಿದರೆ ಬಿತ್ತನೆ ಚಟುವಟಿಕೆ ಆರಂಭಿಸಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಈ ಬಾರಿ ತೊಗರಿ ಬೀಜ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗಿದ್ದು, ಹೆಚ್ಚಿನ ಬೀಜಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡು ದಿನದಲ್ಲಿ ಬರುವ ನಿರೀಕ್ಷೆ ಇದೆ. ರೈತರ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಮಳೆಗಾಗಿ ಪ್ರಾರ್ಥನೆ: ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ರೈತರು ಸಜ್ಜೆ, ತೊಗರಿ, ಹೆಸರು, ಹತ್ತಿ ಸೇರಿ ಇತರೆ ಬೀಜಗಳನ್ನು ಬಿತ್ತಿದ್ದಾರೆ. ಬಿತ್ತಿ ವಾರಗಳೇ ಕಳೆದಿವೆ. ಕೆಲ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತ ಬರ ಎದುರಿಸಿರುವ ರೈತರು ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾದರೂ ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದಾರೆ. ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿಯುತ್ತಿಲ್ಲ. ಹೀಗಾಗಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತಿವೆ.