•ನಾಗರಾಜ ತೇಲ್ಕರ್
ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ನಿರ್ಮಿಸಿದ ಸರ್ಕಾರಿ ಕಟ್ಟಡಗಳು ಪೂರ್ಣಗೊಂಡು ಹಲವು ತಿಂಗಳಾದರೂ ಜನಪ್ರತಿನಿಧಿಗಳು, ಆಯಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆ ಭಾಗ್ಯ ಕಂಡಿಲ್ಲ. ತಾಲೂಕಿನ ಸೋಮನಮರಡಿ, ಮಲ್ಲೇದೇವರಗುಡ್ಡ ಗ್ರಾಪಂ ಕಟ್ಟಡ, ಕೈಗಾರಿಕೆ ತರಬೇತಿ ಕಾಲೇಜು ಕಟ್ಟಡ, ಸರಕಾರಿ ಮಾತ್ಪಳ್ಳಿ ಶಾಲೆ ಕಟ್ಟಡಗಳು ಉದ್ಘಾಟನೆಗಾಗಿ ಕಾಯುತ್ತಿವೆ.
ಗ್ರಾಪಂ ಕಟ್ಟಡಗಳು: ತಾಲೂಕಿನಲ್ಲಿ ಸೋಮನಮರಡಿ, ಮಲ್ಲೇದೇವರಗುಡ್ಡ ಎರಡು ಗ್ರಾಮ ಪಂಚಾಯಿತಿಗಳನ್ನು ಹೊಸದಾಗಿ ರಚಿಸಲಾಗಿದೆ. ಎಚ್ಕೆಆರ್‌ಡಿಬಿ ಅನುದಾನದಲ್ಲಿ ಹೊಸದಾಗಿ ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ. ಕಾಮಗಾರಿ ಸುಣ್ಣಬಣ್ಣ ವಿದ್ಯುತ್, ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಎಂ.ವೈ. ಘೋರ್ಪಡೆ ಸೌಧ ಎಂದು ನಾಮಕರಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡು ಆರೇಳು ತಿಂಗಳಾದರೂ ಉದ್ಘಾಟನೆ ಆಗಿಲ್ಲ. ಹೀಗಾಗಿ ಗ್ರಾಪಂ ಸಭೆ, ಸಮಾರಂಭಗಳನ್ನು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿದೆ.
ಶಾಲೆ ಕಟ್ಟಡ: ಸಮೀಪದ ಮಾತ್ಪಳ್ಳಿ ಗ್ರಾಮದ ಹೊರವಲಯದಲ್ಲಿ ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಕೋಣೆಗಳನ್ನು ನಿರ್ಮಿಸಲಾಗಿದೆ. ಶಾಲೆಯ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಅಲ್ಲಿಯೇ ತರಗತಿಗಳು ನಡೆಯುತ್ತಿವೆ. ಕೂಡಲೇ ಶಾಲಾ ಕಟ್ಟಡ ಉದ್ಘಾಟಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥ ಹನಮಂತಪ್ಪ ಆಗ್ರಹಿಸಿದರು.
ಬಾಡಿಗೆ ಕಟ್ಟಡದಲ್ಲಿ ಐಟಿಐ: ದೇವದುರ್ಗ ಪಟ್ಟಣದ ಹೊರವಲಯದ ವಿದ್ಯಾನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡ್ಮೂರು ವರ್ಷವಾದರೂ ಉದ್ಘಾಟನೆ ಆಗಿಲ್ಲ. ಪಟ್ಟಣದ ಖೇಣೇದ ಮುರಿಗೆಪ್ಪ ಅವರ ಕಟ್ಟಡದಲ್ಲಿ ಕೈಗಾರಿಕೆ ತರಬೇತಿ ಕಾಲೇಜು ನಡೆಯುತ್ತಿದ್ದು, ಪ್ರತಿ ತಿಂಗಳು 25ರಿಂದ 30ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ನಿರ್ಮಿಸಿದ್ದರೂ ಉದ್ಘಾಟನೆಗೆ ಮುಂದಾಗದಿರುವುದು ಅನುಮಾನಕ್ಕೆಡೆ ಮಾಡಿದೆ.
ಉದ್ಘಾಟನೆಗೆ ಆಗ್ರಹ: ಅಧಿಕಾರಿಗಳು, ಶಾಸಕರು ಇತ್ತ ಗಮನಹರಿಸಿ ಸೋಮನಮರಡಿ, ಮಲ್ಲೇದೇವರಗುಡ್ಡ ಗ್ರಾಪಂ ಕಟ್ಟಡ, ಪಟ್ಟಣದ ಕೈಗಾರಿಕೆ ತರಬೇತಿ ಕಾಲೇಜು ಕಟ್ಟಡ, ಮಾತ್ಪಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡಗಳ ಉದ್ಘಾಟನೆಗೆ ಮುಂದಾಗಬೇಕೆಂದು ಶಬ್ಬೀರ ಜಾಲಹಳ್ಳಿ ಆಗ್ರಹಿಸಿದ್ದಾರೆ,