Advertisement

ಫಲಾನುಭವಿ ಆಯ್ಕೆಗೆ ಗ್ರಾಪಂ ಆಡಳಿತ ನಿರ್ಲಕ್ಷ್ಯ

12:29 PM Aug 02, 2019 | Naveen |

ದೇವದುರ್ಗ: ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಗ್ರಾಪಂ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿ ವಸತಿ ವಂಚಿತ ಸಾಮಾನ್ಯ ವರ್ಗದ ಮಹಿಳೆಯರಿಗೆ ಸೂರು ಕಲ್ಪಿಸಿಕೊಡಲು ಪ್ರತಿ ಗ್ರಾಪಂಗೆ 20 ಮನೆ ನಿಗದಿಪಡಿಸಲಾಗಿದೆ. ಪ್ರತಿ ಮನೆಗೆ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ನಿಗದಿ ಪಡಿಸಿದ 20 ಮನೆಗಳಲ್ಲಿ 18 ಸಾಮಾನ್ಯ ವರ್ಗ ಎರಡು ಮನೆ ಅಲ್ಪ್ಪಸಂಖ್ಯಾತ ವರ್ಗದ ಮಹಿಳೆರಿಗೆ ಮೀಸಲಾಗಿವೆ. 2019ರ ಫೆ.28ರೊಳಗೆ ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಕಳುಹಿಸಿಕೊಡುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ 2019ರ ಜ.29ರಂದೇ ಆದೇಶ ಹೊರಡಿಸಿದ್ದಾರೆ. ಆದರೆ ಈವರೆಗೆ ಫಲಾನುಭವಿಗಳ ಆಯ್ಕೆ ಆಗಿಲ್ಲ ಎನ್ನಲಾಗಿದೆ.

ಅರ್ಹರಿವರು: ಬಸವ ವಸತಿ ಯೋಜನೆಯಡಿ ಕಡ್ಡಾಯವಾಗಿ ಮಹಿಳೆಯರನ್ನು ಆಯ್ಕೆ ಮಾಡಬೇಕು. ಗುಡಿಸಲಲ್ಲಿ ವಾಸವಾಗಿರಬೇಕು. ಶೂನ್ಯ ಕೋಣೆಯೊಂದಿಗೆ ಕಚ್ಚಾ ಗೋಡೆ ಹಾಗೂ ಕಚ್ಚಾ ಛಾವಣಿಯಲ್ಲಿ ವಾಸಿಸುವವರು ಸ್ವಂತ ನಿವೇಶನ ಹೊಂದಿ ಬಾಡಿಗೆ ಮನೆಯಲ್ಲಿ ವಾಸಿಸುವರು ಯೋಜನೆಗೆ ಅರ್ಹರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದೇಶಕ್ಕಿಲ್ಲ ಬೆಲೆ: ಫೆ.28 ರೊಳಗೆ ಬಸವ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುಮೋದನೆಗೆ ಕಳುಹಿಸುವಂತೆ ರಾಜೀವ ಗಾಂಧಿ ಗ್ರಾಮೀಣ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಬಕುಮಾರ ಆದೇಶ ಹೊರಡಿಸಿ ಆರು ತಿಂಗಳಾದರೂ ಗ್ರಾಪಂ ಆಡಳಿತ ಮಂಡಳಿಗಳು ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯತಿ ಆಡಳಿತ ಮಂಡಳಿಗಳು ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಗೆ ಈವರೆಗೆ ಒಂದೇ ಒಂದು ಗ್ರಾಮಸಭೆ ನಡೆಸಿಲ್ಲ. ಆದರೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿ ಆಡಳಿತ ಮಂಡಳಿಗಳ ಕ್ರಮ ಸಮರ್ಥಿಸಿಕೊಳ್ಳುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಆಗ್ರಹ: ಕೂಡಲೇ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ ಬಸವ ವಸತಿಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ಪಟ್ಟಿಯನ್ನು ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ದಲಿತ ಸಂಘಟನೆ ಮುಖಂಡ ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದ್ದಾರೆ.

Advertisement

ವಸತಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರ ಆದೇಶ ಪಾಲನೆಗೆ ಪಿಡಿಒಗಳು ಹಿಂದೇಟು ಹಾಕುತ್ತಿದ್ದರೂ ತಾಪಂ ಕಾ.ನಿ. ಅಧಿಕಾರಿಗಳು ಮೌನ ವಹಿಸಿರುವದು ಸರಿಯಲ್ಲ. ಅಧಿಕಾರಿ ಸೇರಿ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಸಿಇಒ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಬೇಕು. ಸೂರು ವಂಚಿತ ಬಡ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು.
ಬಸವರಾಜ ಹುರಕಡ್ಲಿ,
ಗಬ್ಬೂರು ಮಾಹಿತಿ ಹಕ್ಕು ಕಾರ್ಯಕರ್ತ

ತಾಲೂಕಿನ 33 ಗ್ರಾಮ ಪಂಚಾಯಿತಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ ಒಂದೇ ಒಂದು ಗ್ರಾ.ಪಂ. ಆಡಳಿತ ಮಂಡಳಿಗಳು ಫಲಾನುಭವಿಗಳ ಪಟ್ಟಿ ಸಲ್ಲಿಸಿಲ್ಲ. ಮತ್ತೂಂದು ನೋಟಿಸ್‌ ಜಾರಿ ಮಾಡುವೆ. ನಿರ್ಲಕ್ಷ್ಯ ವಹಿಸಿದ ಗ್ರಾ.ಪಂ.ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಇಒಗೆ ಪತ್ರ ಬರೆಯುವೆ.
ಹಾಲಸಿದ್ದಪ್ಪ ಪೂಜೇರಿ,
ತಾಪಂ ಇಒ, ದೇವದುರ್ಗ.

Advertisement

Udayavani is now on Telegram. Click here to join our channel and stay updated with the latest news.

Next