Advertisement

ಗ್ರಾಮೀಣರು ಹೃದಯವಂತರು

02:59 PM Jun 24, 2019 | Naveen |

ದೇವದುರ್ಗ: ಶೈಕ್ಷಣಿಕ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಖೇಣೆದ ಮುರಿಗೆಪ್ಪ ಸಾಹು ಅವರ ಸೇವೆ ಅಪಾರವಾಗಿದೆ. ಅವರ ಸೇವೆ ಪರಿಗಣಿಸಿದರೆ ಅವರು ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಎಂದು ಖ್ಯಾತ ಸಾಹಿತಿ ಡಾ| ಕುಂ. ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಖೇಣೆದ ಮುರಿಗೆಪ್ಪ ಪ್ರತಿಷ್ಠಾನದಿಂದ ರವಿವಾರ ಪಟ್ಟಣದ ಖೇಣೆದ ಮುರಿಗೆಪ್ಪ ಫಂಕ್ಷನ್‌ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇಶದಲ್ಲಿ ಹಲವು ಜನ ಶ್ರೀಮಂತರಿದ್ದಾರೆ. ಆದರೆ ಮುರಿಗೆಪ್ಪ ಸಾಹು ಅವರಂಥವರು ಕೋಟಿಗೊಬ್ಬರು ಸಿಗುತ್ತಾರೆ. ದೇವದುರ್ಗ ತಾಲೂಕಿನಲ್ಲಿ ಎತ್ತ ನೋಡಿದರೂ ಮುರಿಗೆಪ್ಪನವರು ದಾನ ನೀಡಿದ ಭೂಮಿಯೇ ಗೋಚರಿಸುತ್ತದೆ. ಸರಕಾರಿ ಬಾಲಕಿಯರ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜ್‌, ಪ್ರಥಮ ದರ್ಜೆ ಕಾಲೇಜ್‌, ಬಸ್‌ ನಿಲ್ದಾಣ, ಬಸ್‌ ಡಿಪೋ ಸೇರಿ ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ಅವರು ಅನೇಕ ಕೊಡಗೆ ನೀಡಿದ್ದಾರೆ ಎಂದು ಗುಣಗಾನ ಮಾಡಿದರು.

ಗ್ರಾಮೀಣ ಜನರಲ್ಲಿರುವ ಹೃದಯವಂತಿಕೆ ನಗರ ಪ್ರದೇಶದಲ್ಲಿ ಕಂಡುಬರುತ್ತಿಲ್ಲ. ಹಳ್ಳಿಗರು ಮುಗ್ದರು. ಅವರು ಇನ್ನೊಬ್ಬರ ಸಂತೋಷದಲ್ಲಿ ತಮ್ಮ ಸಂತೋಷ ಕಾಣುತ್ತಾರೆ. ಆದರೆ ಆಳುವ ಸರ್ಕಾರಗಳು ಮಾತ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಡೆಗಣಿಸುತ್ತಿರುವುದು ಶೋಚನೀಯ ಎಂದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜ್‌ ಹತ್ತಿರವಿರುವ ಬೃಹತ್‌ ಗಾತ್ರದ ಮರಕ್ಕೆ ಭೇಟಿ ನೀಡಿದ್ದು, ರಾಜ್ಯದಲ್ಲಿ ಹಾವೇರಿ, ದೇವದುರ್ಗ ಸೇರಿ ಮೂರು ಕಡೆ ಇಂತಹ ಬೃಹತ್‌ ಮರಗಳು ಇವೆ. ಮರಗಳ ಸಂರಕ್ಷಣೆಗೆ ಪ್ರತಿಯೊಬ್ಬ ಬುದ್ಧಿ ಜೀವಿಗಳು ಮುಂದಾಗಬೇಕು ಎಂದು ಸಲಹೆ ನೀಡಿದ ಅವರು, ನಾವು ವಿಶ್ವವಿದ್ಯಾಲಯಗಳಿಂದ ಲೇಖಕರಾದವರಲ್ಲ. ಚಳವಳಿಗಳಿಂದ ಲೇಖಕರಾದವರು ಎಂದು ತಮ್ಮ ಅನುಭವ ಬಿಚ್ಚಿಟ್ಟರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಕುಂ. ವೀರಭದ್ರಪ್ಪನವರು ರಾಜ್ಯ ಕಂಡ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರು. ಇವರ ಹಲವು ಕೃತಿಗಳು ಸಿನಿಮಾ ಆಗಿವೆ. ಅವರ ಲೇಖನದಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ ಎಂದರು.

ವಟಗಲ್ ಅರಿವಿನಮನೆಯ ಬಸವ ದೇವರು, ಶಿಖರ ಮಠದ ಶ್ರೀ ಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದ ನಿಜಲಿಂಗ ತಾತಾ ದೇವರ ಗುಂಡಗುರ್ತಿ, ಚಿನ್ನಪ್ಪ ಸಾಹು ಖೇಣೇದ, ಭೀಮೋಜಿರಾವ್‌ ಜಗತಾಪ, ಶಂಕರ ಉಭಾಳೆ, ಭಾನುಪ್ರಕಾಶ ಖೇಣೇದ, ನಿಖೀಲ್ ಖೇಣೆದ, ಭೀಮನಗೌಡ ಇಟಗಿ, ಬಸವರಾಜ ಯಾಟಗಲ್, ಆದೇಶ, ಶಿವು ಪ್ರಸಾದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next