ದೇವದುರ್ಗ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಅವರ ಪುತ್ರ ಸಂತೋಷ ಕುಮಾರ, ಸೋದರ ತಿಮ್ಮರೆಡ್ಡಿ, ಆಪ್ತ ಸಹಾಯಕ ಇಲಿಯಾಜ್ ಸಹಿತ ಎಂಟು ಮಂದಿ ನಗರದ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡಿರುವ ಪೇದೆಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ, ಹಲ್ಲೆ ಆರೋಪ ಹೊತ್ತಿರುವ ಎಂಟು ಮಂದಿಯೂ ಪ್ರತಿ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರಾದ ಹೆಡ್ ಕಾನ್‌ಸ್ಟೆಬಲ್ ಹನುಮಂತ್ರಾಯ, ಮಹೇಶ ಹಾಗೂ ಹನುಮೇಶ ವಿರುದ್ಧವೂ ಸೋಮವಾರ ಪ್ರಕರಣ ದಾಖಲಾಗಿದೆ.
ಇಡೀ ರಾತ್ರಿ ಶಾಸಕಿ ಪ್ರತಿಭಟನೆ ಪುತ್ರ, ಸೋದರ, ಆಪ್ತ ಸಹಾಯಕ ಸಹಿತ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಶಾಸಕಿ ಕರೆಮ್ಮ ಅವರು ಬೆಂಬಲಿಗರೊಂದಿಗೆ ರಾತ್ರಿಯಿಡೀ ಠಾಣೆ ಮುಂದೆ ಪ್ರತಿಭಟಿಸಿದರು.
ಪೊಲೀಸ್ ಪೇದೆ ಪಾನಮತ್ತನಾಗಿ ತಾನೇ ವೀಡಿಯೋ ಮಾಡಿ ಮಗನ ತೇಜೋವಧೆ ಮಾಡಿದ್ದಾನೆ. ಆದ್ದರಿಂದ ಆರೋಪಿ ಪೊಲೀಸ್ ಪೇದೆ ಹಾಗೂ ಪಿಐ ಅಶೋಕ ಸದಲಗಿ ಅವರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಎಸ್ಪಿ ನಿಖಲ್ ಭೇಟಿ ನೀಡಿ ಮಾತುಕತೆ ನಡೆಸಿದರು.