Advertisement

ದೇವದುರ್ಗಕ್ಕೆ 2 ಕೋಟಿ ರೂ. ಬಿಡುಗಡೆ

11:37 AM Aug 23, 2019 | Team Udayavani |

ನಾಗರಾಜ ತೇಲ್ಕರ್‌
ದೇವದುರ್ಗ:
ಕೃಷ್ಣಾ ನದಿ ಪ್ರವಾಹಕ್ಕೆ ದೇವದುರ್ಗ ತಾಲೂಕಿನಲ್ಲಿ ಅಪಾರ ಬೆಳೆ, ನೂರಾರು ಮನೆಗಳಿಗೆ ಹಾನಿಯಾಗಿದ್ದು, ಪರಿಹಾರ ಕಾರ್ಯಕ್ಕಾಗಿ ಜಿಲ್ಲಾಡಳಿತ 2 ಕೋಟಿ ರೂ. ಬಿಡುಗಡೆ ಮಾಡಿದೆ. ಇದಲ್ಲದೇ ತಹಶೀಲ್ದಾರ್‌ ಖಾತೆಯಲ್ಲಿನ 1 ಕೋಟಿ ರೂ.ಗಳನ್ನು ಪರಿಹಾರ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

Advertisement

ಕೃಷ್ಣಾ ನದಿ ಪ್ರವಾಹಕ್ಕೆ ನದಿ ತೀರದ ಗ್ರಾಮಗಳಲ್ಲಿ 327 ಮನೆಗಳಿಗೆ ನೀರು ನುಗ್ಗಿದೆ. 12 ಸಾವಿರ ಎಕರೆ ಪ್ರದೇಶದಲ್ಲಿನ ಬೆಳೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ತಾಲೂಕು ಆಡಳಿತ ಪರಿಹಾರ ಕಾರ್ಯಕ್ಕೆ ಮತ್ತು ಬೆಳೆ ಮತ್ತು ಮನೆಗಳ ಹಾನಿ ಸಮೀಕ್ಷೆಗೆ ಮುಂದಾಗಿದೆ. ಬಿದ್ದ ಮನೆಗಳ ಹಾನಿ ಸಮೀಕ್ಷೆಗೆ ಇಂಜಿನೀಯರ್‌ಗಳ ತಂಡವನ್ನು ರಚಿಸಿದ್ದರೆ, ಬೆಳೆ ಹಾನಿ ಸಮೀಕ್ಷೆಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ.

10 ಸಾವಿರ ರೂ. ಪರಿಹಾರ: ಕೃಷ್ಣಾ ನದಿ ಪ್ರವಾಹಕ್ಕೆ ತಾಲೂಕಿನ ನದಿ ತೀರದ 327 ಮನೆಗಳಿಗೆ ನೀರು ನುಗ್ಗಿದೆ. ತಹಶೀಲ್ದಾರ್‌ ಖಾತೆಯಲ್ಲಿದ್ದ 1 ಕೋಟಿ ರೂ.ಗಳಲ್ಲಿ 327 ಮನೆಗಳಿಗೆ ತಲಾ 10 ಸಾವಿರದಂತೆ ಒಟ್ಟು 32.70 ಲಕ್ಷ ರೂ. ಪರಿಹಾರ ನೀಡಲಾಗಿದೆ.

12 ಸಾವಿರ ಎಕರೆ ಬೆಳೆ ನಷ್ಟ: ಕೃಷ್ಣಾ ನದಿ ಪ್ರವಾಹದಿಂದಾಗಿ ನದಿತೀರದಲ್ಲಿರುವ 30ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಸುಮಾರು 12 ಸಾವಿರ ಎಕರೆಯಲ್ಲಿನ ಭತ್ತ, ಹತ್ತಿ, ತೊಗರಿ, ಸಜ್ಜೆ ಸೇರಿ ಇತರೆ ಬೆಳೆ ಹಾನಿಗೀಡಾಗಿದೆ ಎಂದು ತಾಲೂಕು ಆಡಳಿತ ಅಂದಾಜಿಸಿದೆ. ಸಮೀಕ್ಷೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಬೆಳೆ ನಷ್ಟ ಪರಿಹಾರ ವಿತರಣೆ ಇನ್ನೂ ಆರಂಭಗೊಂಡಿಲ್ಲ. ಸಮೀಕ್ಷೆ ನಂತರ ಬೆಳೆ ಹಾನಿಗೀಡಾದ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಒಣಭೂಮಿ ಹೆಕ್ಟೇರ್‌ಗೆ 6 ಸಾವಿರ ರೂ. ನೀರಾವರಿ ಹೆಕ್ಟೇರ್‌ಗೆ 13ಸಾವಿರ ರೂ. ಪರಿಹಾರ ನಿಗದಿ ಮಾಡಲಾಗಿದೆ. ಪಾರದರ್ಶಕ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದ್ದಾರೆ.

ಇಂಜಿನೀಯರ್‌ಗಳ ತಂಡ ರಚನೆ: ಕೃಷ್ಣಾ ನದಿಗೆ ಅಪಾರ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಹೇರುಂಡಿ, ಪರ್ತಾಪುರು, ಕರ್ಕಿಹಳ್ಳಿ, ಲಿಂಗದಹಳ್ಳಿ, ಮುದುಗೋಟ, ಅಂಜಳ, ಗೋಪಳಾಪುರು, ಅಂಚೆಸುಗೂರು ಸೇರಿ ಇತರೆ ಗ್ರಾಮಗಳಿಗೆ ನೀರು ನುಗ್ಗಿ ಮನೆಗಳು ವಾರದವರೆಗೆ ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾಗಿವೆ. ಮನೆಗಳ ಸ್ಥಿತಿಗತಿ ಪರಿಶೀಲನೆಗೆ ತಾಲೂಕು ಆಡಳಿತ ಇಂಜಿನೀಯರ್‌ರನ್ನು ನೇಮಕ ಮಾಡಿದೆ. ಪಿಡಬ್ಲೂ ್ಯಡಿ, ಪಿಆರ್‌ಡಿ ಇಲಾಖೆಯಿಂದ 10 ಜನ ಕಿರಿಯ ಮತ್ತು ಹಿರಿಯ ಇಂಜಿನೀಯರ್‌ಗಳ ತಂಡ ರಚನೆ ಮಾಡಲಾಗಿದೆ. ಮನೆ ಪೂರ್ಣ ಬಿದ್ದಿದ್ದರೆ 90 ಸಾವಿರ ಮತ್ತು ಭಾಗಶಃ ಬಿದ್ದಲ್ಲಿ 41 ಸಾವಿರ ರೂ. ಪರಿಹಾರ ನಿಗದಿ ಮಾಡಲಾಗಿದೆ. ತಂಡ ನದಿ ತೀರದ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು ಮನೆಗಳ ಪರಿಶೀಲನೆ ಚುರುಕಾಗಿ ನಡೆದಿದೆ.

Advertisement

ಆಹಾರ ಧಾನ್ಯ ಸಂಗ್ರಹ: ಪ್ರವಾಹಕ್ಕೆ ತತ್ತರಿಸಿದ ನೆರೆ ಸಂತ್ರಸ್ತರಿಗಾಗಿ ದಾನಿಗಳಿಂದ ಆಹಾರಧಾನ್ಯ, ಬಟ್ಟೆ ಇತರೆ ವಸ್ತುಗಳು ತಾಲೂಕು ಆಡಳಿತಕ್ಕೆ ಹರಿದುಬರುತ್ತಿದೆ. ಇವುಗಳನ್ನು ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸಂಗ್ರಹಿಸಿ ನೆರೆ ಪೀಡಿತ ಗ್ರಾಮಗಳಿಗೆ ಸಾಗಿಸಲಾಗುತ್ತಿದೆ.

ಸಾರಿಗೆ ಸಂಸ್ಥೆಗೆ 4.12 ಲಕ್ಷ: ಕೃಷ್ಣಾ ನದಿ ಪ್ರವಾಹ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ನೆರೆ ಸಂತ್ರಸ್ತರನ್ನು ಪರಿಹಾರ ಕೇಂದ್ರಗಳಿಗೆ ಬಸ್‌ ಮೂಲಕ ಸ್ಥಳಾಂತರಿಸಲಾಗಿದೆ. ಒಟ್ಟು 29 ಬಸ್‌ಗಳನ್ನು 38 ದಿನಗಳ ಕಾಲ ಬಳಸಲಾಗಿದ್ದು, 3,500 ಕಿ.ಮೀ. ಸಂಚರಿಸಿವೆ. ಇದಕ್ಕಾಗಿ ಕಂದಾಯ ಇಲಾಖೆ ಸಾರಿಗೆ ಸಂಸ್ಥೆಗೆ 4.12 ಲಕ್ಷ ಬಿಲ್ ಪಾವತಿಸಬೇಕಿದೆ. ತುರ್ತು ಸಂದರ್ಭ ಹಗಲು-ರಾತ್ರಿ ಪರಿಹಾರ ಕೇಂದ್ರಗಳಲ್ಲೇ ಬಸ್‌ಗಳನ್ನು ನಿಲ್ಲಿಸಲಾಗಿತ್ತು.

ಸಾರಿಗೆ ಸಂಸ್ಥೆಗೆ 1 ಲಕ್ಷ ರೂ. ಹಾನಿ: ಸಾರಿಗೆ ಕೃಷ್ಣಾ ನದಿ ಪ್ರವಾಹದಿಂದಾಗಿ ಹೂವಿನಹೆಡಗಿ ಸೇತುವೆ ಮುಳುಗಡೆ ಆಗಿದ್ದರಿಂದ ಆ.5ರಿಂದ ದೇವದುರ್ಗ-ಕಲಬುರಗಿ ರಾಜ್ಯ ಹೆದ್ದಾರಿ ಬಸ್‌ ಸಂಚಾರ ಸ್ಥಗಿತವಾಗಿತ್ತು. ಸುಮಾರು ಎರಡು ವಾರಗಳ ಕಾಲ ಬಸ್‌ ಸಂಚಾರ ಸ್ಥಗಿತದ ಹಿನ್ನೆಲೆ ದೇವದುರ್ಗ ಸಾರಿಗೆ ಘಟಕಕ್ಕೆ 1ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ 2ಕೋಟಿ ರೂ. ಬಿಡುಗಡೆ ಮಾಡಿದೆ. ತಹಶೀಲ್ದಾರ್‌ ಖಾತೆಯಲ್ಲಿದ್ದ, 1 ಕೋಟಿ ರೂ.ಗಳಲ್ಲಿ ಈಗಾಗಲೇ 32.70 ಲಕ್ಷ ರೂ.ಗಳನ್ನು ನೀರು ನುಗ್ಗಿದ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇಂಜಿನೀಯರ್‌ ಮತ್ತು ಕಂದಾಯ ಅಧಿಕಾರಿಗಳಿಂದ ಮನೆ ಮತ್ತು ಬೆಳೆ ಹಾನಿ ಸಮೀಕ್ಷೆ ನಡೆದಿದೆ.
ಮಂಜುನಾಥ,
ತಹಶೀಲ್ದಾರ್‌

ಪರಿಹಾರ ಕೇಂದ್ರಗಳಿಗೆ ಬಸ್‌ನಲ್ಲಿ ನೆರೆ ಸಂತ್ರಸ್ತರನ್ನು ಕರೆದುಕೊಂಡು ಬಂದ ಸಾರಿಗೆ ವೆಚ್ಚ 4ಲಕ್ಷ 12ಸಾವಿರ ಬಾಕಿ ಬರಬೇಕಿದೆ. ಹೂವಿನಹೆಡಗಿ ಸೇತುವೆ ಮುಳುಗಡೆ ಆದಾಗ ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಬಸ್‌ ಸಂಚಾರ ಬಂದ್‌ ಆಗಿದ್ದರಿಂದ ಸಾರಿಗೆ ಸಂಸ್ಥೆಗೆ 1 ಲಕ್ಷ ನಷ್ಟವಾಗಿದೆ.
ಹಸನ್‌ಅಲಿ
ಸಾರಿಗೆ ಘಟಕ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next