ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಟೆಂಪಲ್ ರನ್ ಮುಂದುವರಿಸಿದ್ದು ತಮಿಳುನಾಡಿನ ದೇವಾಲಯಗಳ ದರ್ಶನಕ್ಕೆ ತೆರಳಿದ್ದಾರೆ. ತಮಿಳುನಾಡಿನ ತರುವರೂರು ಜಿಲ್ಲೆ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ್ದು ಅಲ್ಲಿಂದ ಶ್ರೀರಂಗಂನಲ್ಲಿ ರಂಗನಾಥಸ್ವಾಮಿ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವೇಗೌಡರ ಜತೆ ಸಚಿವ ಎಚ್.ಡಿ.ರೇವಣ್ಣ ಕೂಡ ಪ್ರಯಾಣ ಬೆಳೆಸಿದ್ದು, ಎರಡೂ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಿದ್ದಾರೆ. ದೇವೇಗೌಡರ ಜತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇವಾಲಯಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇತ್ತಾದರೂ ಕೊನೇ ಕ್ಷಣದಲ್ಲಿ ರದ್ದುಪಡಿಸಿದರು ಎಂದು ಹೇಳಲಾಗಿದೆ. ಕಳೆದ ವಾರ ದೇವೇಗೌಡರು ಧರ್ಮಸ್ಥಳಕ್ಕೆ ಭೇಟಿ ನೀಡಿ ನಂತರ ತಮ್ಮ ಹುಟ್ಟುಹಬ್ಬ ಪ್ರಯುಕ್ತ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದರು.