Advertisement
ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಕೆಲವರು ಪರವಾನಿಗೆ ಇಲ್ಲದೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಕೆಲವರು ಪರವಾನಿಗೆ ನವೀಕರಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಗ್ರಾ.ಪಂ.ಗೆ ನಷ್ಟವಾಗಲಿದ್ದು, ಆದ್ದರಿಂದ ಅಂಥಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ಮುಂದಕ್ಕೆ ಅಂಥಹವರಿಗೆ ಕಾರಣ ನೀಡದೇ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಯಿತು.
ಉಪ್ಪಿನಂಗಡಿ ಪೇಟೆಯಲ್ಲಿ ಶೀತಲೀಕರಣ ವ್ಯವಸ್ಥೆಯುಳ್ಳ ಮೀನು ಮಾರುಕಟ್ಟೆ ತೆರೆಯಲು ಸಭೆಯಲ್ಲಿ ಆಗ್ರಹ ಕೇಳಿಬಂತು. ಹಿರೇಬಂಡಾಡಿಗೆ ತೆರಳುವ ಜೀಪುಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈಗ ಎಲ್ಲ ಜೀಪುಗಳು ಹಳೆ ಬಸ್ ನಿಲ್ದಾಣದಲ್ಲಿಯೇ ಠಿಕಾಣಿ ಹೂಡುತ್ತಿವೆ. ಆದ್ದರಿಂದ ಈ ಬಗ್ಗೆ ಕ್ರಮಕ್ಕೆ ಸಂಚಾರಿ ಪೊಲೀಸರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
Related Articles
ಹೊಸ ಬಸ್ ನಿಲ್ದಾಣದಲ್ಲಿ ಬೇಕಾ ಬಿಟ್ಟಿಯಾಗಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಇದಕ್ಕೊಮ್ಮೆ ಪಂಚಾಯತ್ ದಂಡ ಕೂಡ ವಿಧಿಸಿತ್ತು. ಆದರೂ ಮರುದಿನದಿಂದ ಮತ್ತೆ ಅದೇ ಸ್ಥಿತಿಯಿರುವುದರಿಂದ ದಿನಕ್ಕೊಬ್ಬರಂತೆ ಪಂಚಾಯತ್ ಸಿಬಂದಿಯನ್ನು ಅಲ್ಲಿ ನಿಲ್ಲಿಸಿ, ಬಸ್‌ಗಳು ಹಾಗೂ ಇತರ ಅಗತ್ಯದ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಬಸ್ ನಿಲ್ದಾಣ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಯಿತು.
Advertisement
ಪಿಡಿಒ ಅಬ್ದುಲ್ಲಾ ಅಸಾಫ್ ಮಾತನಾಡಿ, ವಸತಿ ಯೋಜನೆಯಡಿ ಮನೆಗಳನ್ನು ಪಡೆದ ಫಲಾನುಭವಿಗಳು ನಿಗದಿತ ಅವಧಿಗೆ ಮನೆಗಳನ್ನು ಪೂರ್ಣಗೊಳಿಸದಿದ್ದರೆ ಅಂಥವರನ್ನು ಪಟ್ಟಿಯಿಂದ ಕೈಬಿಡುವ ಅನಿವಾರ್ಯತೆ ಇದ್ದು, ಸದಸ್ಯರು ಫಲಾನುಭವಿಗಳಿಗೆ ಮನವರಿಕೆ ಮಾಡುವಂತೆ ಸೂಚಿಸಿದರು. ಸದಸ್ಯರಾದ ಗೋಪಾಲ ಹೆಗ್ಡೆ, ಸುನೀಲ್ ದಡ್ಡು, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಚಂದ್ರಾವತಿ, ಭಾರತಿ, ಯೋಗಿನಿ, ಜಮೀಳಾ, ಸುಶೀಲಾ, ಝರೀನಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿ, ವಂದಿಸಿದರು.