ಬೆಂಗಳೂರು: ಲಿಂಗಾಯಿತ ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ನಿರ್ಣಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ರವಿವಾರ ಕೈಗೊಂಡಿದೆ.
ಆರ್.ಟಿ. ನಗರದ ತರಳಬಾಳು ಕೇಂದ್ರದಲ್ಲಿ ರವಿವಾರ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮತ್ತು ಪ್ರಾತಿನಿಧಿಕ ಸಭೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಗಳನ್ನೆಲ್ಲವನ್ನೂ ಒಗ್ಗೂಡಿಸಿಕೊಂಡು ಹೋಗುವ ಕುರಿತಂತೆ ನಿರ್ಣಯ ಕೈಗೊಳ್ಳಲಾಯಿತು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಗೆಯೇ ವಿಧಾನ ಸೌಧದ ಮುಂಭಾಗ ಸರಕಾರ ಬಸಣ್ಣನವರ ಪ್ರತಿಮೆ ಸ್ಥಾಪನೆ ಮಾಡಬೇಕು ಎಂಬ ಒತ್ತಾಯ. ಜತೆಗೆ ಅಖೀಲ ಭಾರತ ವೀರಶೈವ ಮಹಾಸಭಾ ಅನ್ನು ಅಖಿಲ ಭಾರತ ಲಿಂಗಾಯಿತ ವೀರಶೈವ ಮಹಾಸಭಾ ಎಂದು ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಸರ್ವರಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟ ಸಮಾಜ ಇದಾಗಿದೆ. ಆದರೆ ಬಸವತತ್ವ ಅನುಯಾಯಿಗಳಾದ ಲಿಂಗಾಯಿತ ವೀರಶೈವರೆ ಇಂದು ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದು ನಿಜಕ್ಕೂ ದೌಭಾಗ್ಯìದ ಸಂಗತಿಯಾಗಿದೆ ಎಂದು ಹೇಳಿದರು.
Related Articles
ಶೇ. 18 ರಿಂದ 20ರಷ್ಟು ಮಂದಿ
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವೀರಶೈವ ಮತ್ತು ಲಿಂಗಾಯಿತ ಸಮುದಾಯದವರಿದ್ದಾರೆ. ರಾಜ್ಯದಲ್ಲಿ ಶೇ. 18 ರಿಂದ 20ರಷ್ಟು ಲಿಂಗಾಯಿತ ವೀರಶೈವರಿದ್ದಾರೆ. ಆದರೆ ಇವರೆಲ್ಲರೂ ಈಗ ಸಮಾಜಿಕ ನ್ಯಾಯ ದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರ ಒಬಿಸಿಗೆ ಶೇ.27ರಷ್ಟು ಮೀಸಲಾತಿ ನೀಡಿದೆ. ಇದರಲ್ಲಿ ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ವ್ಯಾಪಿ ಹೋರಾಟ
1994ರ ಮಂಡಲ್ ವರದಿ ರೀತಿಯಲ್ಲಿ ಒಬಿಸಿ ಕಲ್ಪಿಸಲಾಯಿತು. ಲಿಂಗಾಯಿತ ವೀರಶೈವರಲ್ಲಿ ಸುಮಾರು 90 ಉಪ ಪಂಗಡಗಳಿವೆ. ಆದರೆ ಈ ಪೈಕಿ ಕೇವಲ 14 ಉಪ ಪಂಗಡಗಳನ್ನು ಮಾತ್ರ ಕೇಂದ್ರ ಸರ್ಕಾದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಉಳಿದ 76 ಉಪ ಪಂಗಡಗಳ ಜನರಿಗೆ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಿ ಲಿಂಗಾಯಿತವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಬೇಡಿಕೆ ಈಡೇರಿಕೆಗಾಗಿ ರಾಜ್ಯವ್ಯಾಪಿ ಹೋರಾಟ ನಡೆಸಲು ತೀರ್ಮಾನವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಎನ್.ತಿಪ್ಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.