Advertisement

ಉದ್ಯೋಗಸ್ಥ ಕನ್ನಡಿಗರ ನಿಖರ ಸಂಖ್ಯೆ ಪತ್ತೆ: ಡಿ.ಸಿ.ಗೆ ಸೂಚನೆ

02:43 AM May 05, 2022 | Team Udayavani |

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ವಿವಿಧ ಕಾರ್ಖಾನೆ ಗಳಲ್ಲಿ ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ನಿಖರ ಸಂಖ್ಯೆಯನ್ನು ಪತ್ತೆ ಮಾಡಿ ವರದಿ ನೀಡುವಂತೆ ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಬಿ.ಎಂ. ಫಾರೂಕ್‌ ಅಧ್ಯಕ್ಷತೆಯ ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿಯು ಬಾಕಿ ಭರವಸೆ ಸಂಖ್ಯೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿತು.

ವಿಶೇಷ ಆರ್ಥಿಕ ವಲಯದಲ್ಲಿರುವ ಎಂಆರ್‌ಪಿಎಲ್‌ ಮತ್ತಿತರ ಕಾರ್ಖಾನೆ ಗಳಲ್ಲಿ ನಿಯಮಾವಳಿಯಂತೆ ಶೇ. 70ರಷ್ಟು ಕನ್ನಡಿಗರಿಗೆ ಉದ್ಯೋಗಾ ವಕಾಶ ನೀಡಬೇಕು. ಅಲ್ಲಿ ಅಷ್ಟು ಮಂದಿ ಕನ್ನಡಿಗರು ಕೆಲಸ ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಕೂಲಂಕಷವಾಗಿ ತಪಾಸಣೆ ನಡೆಸಿ ವರದಿ ನೀಡುವಂತೆ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್‌ ಮತ್ತು ಎಸ್‌.ವಿ. ಸಂಕನೂರು, ಕೆ.ಟಿ. ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್‌, ಶಶೀಲ್‌ ಜಿ. ನಮೋಶಿ, ರುದ್ರೇಗೌಡ ಮತ್ತಿತರ ಸದಸ್ಯರು ಸೂಚಿಸಿದರು. ಮುಂದಿನ ಎರಡು ತಿಂಗಳುಗಳಲ್ಲಿ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದರು.

ವಿಶೇಷ ಆರ್ಥಿಕ ವಲಯದಲ್ಲಿ ಪರಿಸರ ಮಲಿನಗೊಂಡಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಸಮಿತಿಯಿಂದ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ ಎಂದ ಅಧ್ಯಕ್ಷರು, ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಬೆಳೆಗಳ ಬಗ್ಗೆ ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಮೀನುಗಾರಿಕೆ ಇಲಾಖೆಯಿಂದ ಈ ವ್ಯಾಪ್ತಿಯ ಜಲಪ್ರದೇಶದಲ್ಲಿ ಕೆಲವು ಮೀನು ತಳಿಗಳು ನಾಶಗೊಂಡಿರುವ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.

ಪರಿಸರದಲ್ಲಿ ನೆಲ-ಜಲ ಮತ್ತು ವಾಯುಮಾಲಿನ್ಯದ ಬಗ್ಗೆ ಅಂ.ರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ತಪಾಸಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು. ಅಲ್ಲಿನ ಜನರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆಯೂ ವರದಿ ನೀಡುವಂತೆ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ಅವರಿಗೆ ನಿರ್ದೇಶನ ನೀಡಲಾಯಿತು.

Advertisement

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ, ಕೆ.ಐ.ಎ.ಡಿ.ಬಿ. ವ್ಯ. ನಿರ್ದೇಶಕ ಶಿವಶಂಕರ್‌, ಪರಿಸರ ಮತ್ತು ಜೀವಿ ಪರಿಸ್ಥಿತಿಯ ಪ್ರ. ಕಾರ್ಯದರ್ಶಿ ವಿಜಯ್‌ ಮೋಹನ್‌ ರಾಜ್‌, ಜಿ.ಪಂ. ಸಿಇಒ ಡಾ| ಕುಮಾರ್‌ ಇದ್ದರು.

ಎಂಆರ್‌ಪಿಎಲ್‌ ವ್ಯ. ನಿರ್ದೇಶಕ ಎಂ. ವೆಂಕಟೇಶ್‌ ಸೇರಿದಂತೆ ವಿವಿಧ ಕಾರ್ಖಾನೆಗಳ ಮುಖ್ಯಸ್ಥರು, ಅಧಿಕಾರಿ ಗಳು ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ ದಾಸ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next