ಕುಂದಗೋಳ: ತಾಲೂಕಿನ ಸಂಶಿಯ ಬಸ್ ನಿಲ್ದಾಣದ ಶೌಚಾಲಯ ಅಧೋಗತಿ ತಲುಪಿದೆ. ಶೌಚಕ್ಕೆಂದು ತೆರಳಿದರೆ ಗಬ್ಬು ದುರ್ನಾತ ಮೂಗಿಗೆ ರಾಚುತ್ತದೆ. ಹೀಗಾಗಿ ಪ್ರಯಾಣಿಕರು ನಿಲ್ದಾಣದ ಆವರಣದಲ್ಲಿಯೇ ನಿಸರ್ಗದ ಕರೆಗೆ ಓಗೊಡಬೇಕಾಗಿದೆ.
ಈ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು ನಿತ್ಯವೂ ಸಾಕಷ್ಟು ದಟ್ಟಣೆ ಇರುತ್ತದೆ. ಅಲ್ಲದೇ ಈ ಗ್ರಾಮಕ್ಕೆ ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಆಗಮಿಸುತ್ತಾರೆ. ಆದರೆ ಶೌಚಾಲಯದ ದುಸ್ಥಿತಿಯಿಂದಾಗಿ ಹಿಡಿಶಾಪ ಹಾಕುವಂತಾಗಿದೆ. ಶೌಚಾಲಯದ ಒಳಗೆ ಪ್ರವೇಶಿಸಿದರೆ ಗಬ್ಬು ನಾರುತ್ತದೆ. ಮೂತ್ರ ವಿಸರ್ಜಿಸುವ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸಕಡ್ಡಿಗಳು ತುಂಬಿದ್ದು, ಮೂತ್ರ ನಿಂತಲ್ಲೇ ನಿಲ್ಲುತ್ತದೆ. ಅಲ್ಲದೇ ಗೋಡೆಯ ಮೇಲೆಲ್ಲ ಉಗುಳಿನ ಕಲೆಗಳು ರಾರಾಜಿಸುತ್ತಿವೆ. ಕೈ ತೊಳೆಯುವ ಟಾಕಿ ಒಡೆದಿದೆ. ಕೈ ತೊಳೆಯಲು ಸಹ ಹನಿ ನೀರಿಲ್ಲದೇ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಮಲ ವಿಸರ್ಜಿಸುವ ಕೋಣೆಗಳಂತೂ ಸದಾ ಬೀಗ ಹಾಕಿಕೊಂಡೇ ಇರುತ್ತವೆ.
ನಿಲ್ದಾಣದ ದುಸ್ಥಿತಿ: ಕುಡಿಯುವ ನೀರಿನ ತೊಟ್ಟಿಗಳಿದ್ದರೂ ಅಲ್ಲಿ ಹನಿ ನೀರು ಬಾರದೆ ಇರುವುದರಿಂದ ಕಿಡಿಗೇಡಿಗಳು ನಲ್ಲಿಯನ್ನೇ ಮುರಿದು ಅದರ ಒಳಗೆ ಹೊಲಸನ್ನು ತುಂಬಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ನವೀಕರಣಗೊಂಡ ಒಂದೂವರೆ ವರ್ಷದಲ್ಲಿಯೇ ತನ್ನ ಹಳೆಯ ಸ್ವರೂಪಕ್ಕೆ ಬಸ್ ನಿಲ್ದಾಣ ಬಂದಿದೆ. ನಿಲ್ದಾಣದ ನೆಲಕ್ಕೆ ಹೊದಿಸಿದ ಸಿಮೆಂಟ್ ಬ್ಲಾಕ್‌ಗಳು ಅಲ್ಲಲ್ಲಿ ಒಡೆಯಲಾರಂಭಿಸಿದೆ. ಕೊಳವೆ ಬಾವಿ ಸಹ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿದೆ. ಗ್ರಾಪಂದವರು ಪಕ್ಕದಲ್ಲಿರುವ ದರ್ಗಾದಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸುತ್ತಿದ್ದರು ಸಹ ಶುಚಿತ್ವ ಕಾಯ್ದುಕೊಳ್ಳಲು ಯಾರೂ ಇಲ್ಲದಿರುವುದರಿಂದ ಸದಾ ಶೌಚಾಲಯಕ್ಕೆ ಬೀಗ ಮುದ್ರೆ ಬಿದ್ದಿದೆ.
ಊರಿನಿಂದ ಅವರಿಗೆ ನಾವೆಲ್ಲ ಸಹಕರಿಸುತ್ತಿದ್ದರೂ ನಿರ್ವಹಣೆ ಕೊರತೆಯಿಂದ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೌಚಾಲಯವು ಈ ಸ್ಥಿತಿಗೆ ಬಂದಿದೆ. ಅಲ್ಲದೇ, ಬೆಳಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಬಿಡಲು ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಸ್ಪಂದಿಸುತ್ತಿಲ್ಲ
,•ಎ.ಬಿ. ಉಪ್ಪಿನ, ಗ್ರಾಮದ ಮುಖಂಡ
ಶೌಚಾಲಯದಲ್ಲಿ ನೀರು ಮುಂದೆ ಸಾಗದಿರುವುದರಿಂದ ಈ ಸ್ಥಿತಿಗೆ ಬಂದಿದೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದ್ದು, ಸ್ವಚ್ಛಗೊಳಿಸಿದ ಬಳಿಕ ಬೀಗ ತೆಗೆಯಲಾಗುವುದು.
• ಎಂ.ಎಚ್. ಅಗಸಿಮನಿ, ನಿಲ್ದಾಣ ಅಧಿಕಾರಿ