Advertisement
ಸ್ಥಳೀಯ ರಾಜ್ಯ ಹೆದ್ದಾರಿಯಲ್ಲಿ ನೀರಿನ ಪೈಪ್ ಒಡೆದಿದೆ ಎಂದು ಪುರಸಭೆಯವರು ರಸ್ತೆ ಅಗೆದು ಪೈಪ್ ಜೋಡಿಸಿ ಸುಮಾರು 6 ತಿಂಗಳು ಕಳೆದರೂ ರಸ್ತೆ ರಿಪೇರಿ ಮಾಡದೇ ಹಾಗೆ ಬಿಟ್ಟಿರುವುದರಿಂದ ಅಲ್ಲಿ ತಗ್ಗು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪ್ರತಿದಿನ ನಾಲ್ಕೈದು ವಾಹನಗಳು ಸಂಚರಿಸುತ್ತವೆ. ಇಲ್ಲಿ ಸಂಚರಿಸುವ ವಾಹನದಾರರಿಗೆ ಇಲ್ಲಿರುವ ತಗ್ಗಿನಿಂದ ತಮ್ಮ ವಾಹನ ಎಲ್ಲ ಬೀಳುತ್ತದೋ ಎನ್ನುವ ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರದ ಪ್ರಮುಖ ರಸ್ತೆ ಮತ್ತು ಜನನಿಬಿಡ ಪ್ರದೇಶವಾದ ಕಾರಣ ನಿತ್ಯ, ಸಾವಿರಾರು ಜನ ಪಾದಚಾರಿಗಳು ಕೂಡ ಸಂಚರಿಸುತ್ತಾರೆ. ಪುರಸಭೆಯವರು ಪೈಪ್‌ಲೈನ್ ರಿಪೇರಿಗೆಂದು ಅಗೆದು ಸುಮಾರು 6 ತಿಂಗಳುಗಳೆ ಕಳೆದರೂ ರಿಪೇರಿ ಮಾಡುವ ಮನಸ್ಸು ಮಾತ್ರ ಯಾರಿಗೂ ಇಲ್ಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Related Articles
Advertisement
ಇಕ್ಕಟ್ಟಾದ ರಸ್ತೆ : ಸ್ಥಳೀಯ ಗಾಂಧಿ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಎರಡು ಬದಿಗಳಲ್ಲಿ ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದೆ. ಮುಧೋಳ, ಬಾಗಲಕೋಟೆ, ಹುಬ್ಬಳ್ಳಿ, ಜಮಖಂಡಿ, ವಿಜಯಪುರಗಳಿಗೆ ಹೋಗುವ ವಾಹನಗಳು ಇದೆ ರಸ್ತೆಯಲ್ಲಿ ಹಾದು ಸಂಚರಿಸುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.
ಈ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು ಮೌನಕ್ಕೆ ಶರಣಾಗಿರುವ ಪುರಸಭೆಯ ಮುಖ್ಯಾಧಿಕಾರಿಗಳು, ಸಾರ್ವಜನಿಕರು ರೊಚ್ಚಿಗೆದ್ದು ಉಗ್ರ ಹೋರಾಟ ಮಾಡುವ ಮುನ್ನ ಈ ರಸ್ತೆ ರಿಪೇರಿಗೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಯಾರು ಬೆಲೆ ಕಟ್ಟುವವರಾರು ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.
ನಾವು ರಸ್ತೆಯನ್ನು ಅಗೆಯುವ ಮೊದಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇವೆ. ರಸ್ತೆ ಅಗೆದು ಕೆಲಸ ಮುಗಿದ ತಕ್ಷಣ ನೀವೆ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ನಮಗೆ ಅದಕ್ಕೆ ತಗಲುವಷ್ಟು ಹಣ ನೀಡಿದರೆ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ ಅವರು ಇಲ್ಲಿಯವರೆಗೂ ಯಾವುದನ್ನು ಮಾಡಿಲ್ಲ. ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. -ಎಂ.ಆರ್.ಕುಲಕರ್ಣಿ, ರಾಜ್ಯ ಹೆದ್ದಾರಿ ಎ.ಇ.ಇ
ತಗ್ಗು ಗುಂಡಿ ಬಿದ್ದ ರಸ್ತೆ ದುರಸ್ತಿಯನ್ನು ನಾವೇ ಮಾಡಬೇಕು. ತಾಂತ್ರೀಕ ಕಾರಣದಿಂದ ವಿಳಂಬವಾಗಿದೆ. ಸದ್ಯ ಪಟ್ಟಣದಲ್ಲಿ ಡಾಂಬರೀಕರಣ ಕಾಮಗಾರಿಗಳು ಪ್ರಾರಂಭವಾಗಿವೆ. ಎರಡು-ಮೂರು ದಿನಗಳಲ್ಲಿ ಹೆದ್ದಾರಿ ಮಧ್ಯೆಯ ಗುಂಡಿಗಳಿಗೆ ಡಾಂಬರೀಕರಣ ಮಾಡುತ್ತೇವೆ. –ಬಿ.ಆರ್.ಕಮತಗಿ. ಮುಖ್ಯಾಧಿಕಾರಿಗಳು ಪುರಸಭೆ.
-ಚಂದ್ರಶೇಖರ ಮೋರೆ