ಶ್ರೀನಿವಾಸಪುರ: ಸ್ವಲ್ಪ ಮಳೆ ಬಂದ್ರೂ ಸಾಕು ಪಟ್ಟಣದ ಹೃದಯಭಾಗದಲ್ಲಿನ ಮಹಾತ್ಮ ಗಾಂಧಿ ರಸ್ತೆ ಕೆರೆಯಂತಾಗುತ್ತೆ. ವಾಹನಗಳು, ಪಾದಚಾರಿಗಳುಕೆಸರಿನಲ್ಲೇ ಸಂಚರಿಸಬೇಕು. ಜೋಡಿ ರಸ್ತೆಯಾಗಿದ್ದರೂ ಸೂಕ್ತ ಪಾದಚಾರಿ ಮಾರ್ಗವಿಲ್ಲ. ಆದ ಕಾರಣ, ಜನ ಅನಿವಾರ್ಯವಾಗಿ ರಸ್ತೆ ಮಧ್ಯೆ, ಕೆಸರಿನಲ್ಲೇ ಓಡಾಡುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ ವೃತ್ತದಿಂದ ದಕ್ಷಿಣದ ಕಡೆಗೆ ಅಂದರೆ ಮುಳಬಾಗಿಲು ವೃತ್ತದವರಿಗೆ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಇದು ಜೋಡಿ ರಸ್ತೆಯೂ ಆಗಿದೆ. ಇನ್ನು ಬಸ್ ನಿಲ್ದಾಣ ವೃತ್ತದಿಂದ ಉತ್ತರ ಕಡೆಗಿರುವ ರಸ್ತೆ ಡಾಂಬರೀಕರಣವಾಗಿದೆ. ರಸ್ತೆಯ ಎರಡು ಬದಿಗಳಲ್ಲಿ ಮಳೆ ನೀರು ನಿಂತು ಜನ ಓಡಾಡಲು ಪರದಾಡುವಂತಾಗಿದೆ.
ಸೊಳ್ಳೆ ಉತ್ಪತ್ತಿ ತಾಣ: ರಸ್ತೆಯಲ್ಲಿ ಮಳೆ ಜೊತೆ ಕೊಳಚೆ ನೀರು ಶೇಖರಣೆಯಾಗುತ್ತದೆ. ಅದೇ ರೀತಿ ನೀರು ನಿಂತ ಕಡೆ ಈಗ ಹುಲ್ಲು ಬೆಳೆದು ಸೊಳ್ಳೆಗಳಿಗೆ ಆಶ್ರಯ ಕಲ್ಪಿಸಿದಂತಾಗಿದೆ. ಉತ್ತರ ದಿಕ್ಕಿನ ರಸ್ತೆಯಲ್ಲಿ ಬಹಳಷ್ಟು ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಇವೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿ ದಿನ ವಿದ್ಯಾರ್ಥಿಗಳು ಓಡಾಡಬೇಕಾಗಿದೆ.
ಜೀವಕ್ಕೆ ಸಂಚಕಾರ: ಪಾದಚಾರಿಗಳಿಗೆಂದು ಪ್ರತ್ಯೇಕ ರಸ್ತೆ ಇಲ್ಲದೇ ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ಮಳೆ ನೀರು ನಿಂತ ಕಡೆ ನಡೆದುಹೋಗಬೇಕಾದ್ರೆ ಯಾವುದಾದ್ರು ವಾಹನ ರಭಸವಾಗಿ ಸಂಚರಿಸಿದ್ರೆ ಕೊಳಚೆ ನೀರು ಬಟ್ಟೆಗಳ ಮೇಲೆ ಚೆಲ್ಲುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಸಮವಸ್ತ್ರ ಕೆಸರುಮಯವಾಗಿ ಮತ್ತೆ ಮನೆಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಶಾಲೆಗೆ ಬರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು. ಅಲ್ಲದೆ, ರಸ್ತೆಯಲ್ಲಿ ಓಡಾಡುವುದರಿಂದ ಜೀವಕ್ಕೂ ಸಂಚಕಾರ ಬರುತ್ತದೆ.
ಸೂಕ್ತ ಚರಂಡಿ ಇಲ್ಲ: ಬಸ್ ನಿಲ್ದಾಣ ವೃತ್ತದಲ್ಲಿ ಹಲವು ವರ್ಷಗಳಿಂದ ಮಳೆ ಬಂದಾಗ ನೀರು ನಿಂತು, ಹೊಂಡವಾಗಿ ಪರಿವರ್ತನೆಯಾಗುತ್ತದೆ. ಈ ಜಾಗದಲ್ಲಿ ನೀರು ಸರಾಗವಾಗಿ ಹರಿಯಲು ಸೂಕ್ತ ಕಾಲುವೆ ವ್ಯವಸ್ಥೆ ಮಾಡಿಲ್ಲ. ಹಿಂದೆ ರಸ್ತೆಗಳ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ನೀರು ಚರಂಡಿಗಳಿಗೆ ಸುಲಭವಾಗಿ ಹರಿಯಲು ಗಮನಹರಿಸಬೇಕಾಗಿತ್ತು. ಅದು ಸಾಧ್ಯವಾಗಿಲ್ಲ, ಅದೇ ರೀತಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಂಬರ್ ಕಿತ್ತು ಬಂದು ಹಳ್ಳಗಳಾಗಿವೆ. ಇದರಿಂದ ಆ ಜಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಭೂಮಿ ಇರುವುದರಿಂದ ಸಾರ್ವಜನಿಕವಾಗಿ ಓಡಾಡುವ ಹಂದಿಗಳು ಕೆದರಿ ಹೊರಳಾಡುವುದರಿಂದ ಆ ಸ್ಥಳಗಳು ಹಳ್ಳಗಳಾಗಿ, ಮಳೆ ಬಂದಾಗ ನೀರು ನಿಂತುಕೊಳ್ಳುತ್ತವೆ. ಇದರಿಂದ ಅಶುಚಿತ್ವಕ್ಕೆ ಆಸ್ಪದವಾಗುತ್ತವೆ. ರಸ್ತೆಯುದ್ದ ಗಮನಿಸುವಂತೆ ಬಸ್ ನಿಲ್ದಾಣ ವೃತ್ತ, ಇಂದಿರಾ ಕ್ಯಾಂಟೀನ್ ಮುಂದೆ, ಬಾಲಕಿಯರ ಕಾಲೇಜು ಮುಂಭಾಗ ಅಥವಾ ಗಣಪತಿ ದೇವಾಲಯ ಸಮೀಪದಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿರುವಿನಲ್ಲಿ ಹೀಗೆ ಮುಂದುವರಿದಂತೆ ರಸ್ತೆಯ ಉತ್ತರ ದಿಕ್ಕಿನ ರಸ್ತೆಯಲ್ಲಿ ಇಂತಹ ಪರಿಸ್ಥಿತಿ ಕಾಣಬಹುದಾಗಿದೆ. ಆದ್ದರಿಂದ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
ಪಾದಚಾರಿಗಳಿಗೆ ರಸ್ತೆಬದಿ ಓಡಾಟಕ್ಕೆ ಪ್ರತ್ಯೇಕವಾಗಿ ಅನುಕೂಲ ಮಾಡಿಕೊಡಬೇಕು ಹಾಗೂ ರಸ್ತೆಯಲ್ಲಿ ಡಾಂಬರ್ ಕಿತ್ತು ಸ್ಥಳಗಳನ್ನು ಮುಚ್ಚಿ ಸಮತಟ್ಟ ಮಾಡುವ ಅಗತ್ಯವಿದೆ. ಈಗಾದರೆ ಪಾದಚಾರಿಗಳು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುತ್ತದೆ.
ಹಲವು ವರ್ಷಗಳ ಹಿಂದೆ ರಸ್ತೆ ನಿರ್ಮಾಣವಾಗಿದೆ. ಕೆಲವು ಕಡೆ ಡಾಂಬರ್ ಕಿತ್ತುಬಂದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಆದಷ್ಟು ಬೇಗ ನೀರು ರಸ್ತೆಯಲ್ಲಿ ನಿಲ್ಲದಂತೆ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
–ವಿ.ಮೋಹನ್‌ಕುಮಾರ್, ಮುಖ್ಯಾಧಿಕಾರಿ, ಶ್ರೀನಿವಾಸಪುರ.
–ಕೆ.ವಿ.ನಾಗರಾಜ್