Advertisement

ಹದಗೆಟ್ಟಿದೆ ಕುಂಬ್ರ-ಮಾಡ ಸಂಪರ್ಕ ರಸ್ತೆ

10:49 PM Jun 03, 2019 | Team Udayavani |

ಬಡಗನ್ನೂರು: ಹಲವು ವರ್ಷಗಳ ಹಿಂದೆ ಡಾಮರು ಕಾಮಗಾರಿ ಕಂಡ ಕುಂಬ್ರ- ಮಾಡ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಗ್ರಾ.ಪಂ. ರಸ್ತೆ ಈಗ ಸಂಪೂರ್ಣ ಹದಗೆಟ್ಟಿದೆ. ವಾಹನಗಳಲ್ಲಿ ಬಿಡಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ. ಮಳೆ ಬಂದಾಗ ರಸ್ತೆಯಲ್ಲೇ ಹರಿಯುವ ಚರಂಡಿ ನೀರು ಕೆಲವು ಮನೆಗಳ ಒಳಗೂ ಬರುತ್ತಿದೆ. ರಸ್ತೆಯನ್ನು ದುರಸ್ತಿ ಮಾಡಿ ಎಂದು 10 ವರ್ಷಗಳಿಂದ ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಆದರೆ ಇವರ ಬೇಡಿಕೆಗೆ ಮನ್ನಣೆ ದೊರೆಯಲೇ ಇಲ್ಲ.

Advertisement

ಮಾಡ ಶ್ರೀ ಉಳ್ಳಾಕುಲು ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಸುಮಾರು 50 ವರ್ಷಗಳ ಹಿಂದೆಯೇ ಇಲ್ಲಿ ರಸ್ತೆ ನಿರ್ಮಾಣವಾಗಿದೆ. ಆದರೆ ಅದಕ್ಕೆ ಡಾಮರು ಕಾಮಗಾರಿ ಮಾಡಿಸಬೇಕಾದಲ್ಲಿ ಗ್ರಾಮಸ್ಥರು ಹರಸಾಹಸವನ್ನೇ ಪಟ್ಟಿದ್ದರು. ಅನೇಕ ವರ್ಷಗಳ ಹೋರಾಟದ ಬಳಿಕ ಡಾಮರು ಕಂಡಿತ್ತು. ಈ ಕಾರಣಕ್ಕೆ ಸುಮಾರು 15 ವರ್ಷಗಳ ಹಿಂದೆ ರಸ್ತೆಗೆ ಡಾಮರು ಹಾಕಲಾಗಿತ್ತು. ಆ ಬಳಿಕ ರಸ್ತೆಯನ್ನು ಯಾರೂ ಕಣ್ಣೆತ್ತಿಯೂ ನೋಡಿಲ್ಲ. ದುರಸ್ತಿಗೆ ಅನುದಾನವನ್ನೂ ಇರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಗಾಲದಲ್ಲಿ ಕಷ್ಟ
ಈಗ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿರುವುದಾಗಿ ಮಾಹಿತಿ ಇದ್ದು, ಅದು ಮಂಜೂರಾಗಿ ಬಂದರೂ ಕಾಮಗಾರಿ ಆರಂಭವಾಗಲು ಮಳೆ ಗಾಲ ಮುಗಿಯುವ ವರೆಗೂ ಕಾಯಬೇಕಾಗುತ್ತದೆ. ಹೀಗಾಗಿ, ಈ ಮಳೆಗಾಲದಲ್ಲಿ ಸಂಚಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಚರಂಡಿ ವ್ಯವಸ್ಥೆ ಇಲ್ಲ
ರಸ್ತೆಗೆ ಪ್ರಮುಖವಾಗಿ ಇರಬೇಕಾದ ಚರಂಡಿ ವ್ಯವಸ್ಥೆಯೇ ಇಲ್ಲಿ ಇಲ್ಲವಾಗಿದೆ. ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯಲ್ಲೇ ನೀರು ಹರಿಯುವ ಕಾರಣ ಮಳೆ ನೀರಿಗೆ ಡಾಮರು ಕೊಚ್ಚಿ ಹೋಗುತ್ತಿದೆ. ರಸ್ತೆ ನಿರ್ಮಾಣ ಮಾಡುವ ವೇಳೆಯೂ ಚರಂಡಿ ನಿರ್ಮಾಣ ಕಾರ್ಯ ಆಗಿರಲಿಲ್ಲ. ಇದೀಗ ಪ್ರತೀ ಮಳೆಗಾಲದಲೂ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ.

30 ಮನೆಗಳಿಗೆ ಸಂಪರ್ಕ
ಮಾಣಿ-ಮೈಸೂರು ಹೆದ್ದಾರಿ ಯಿಂದ ಮಾಡದ ವರೆಗೆ 3 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ರಸ್ತೆಯುದ್ದಕ್ಕೂ ಹೊಂಡಗಳೇ ತುಂಬಿಕೊಂಡಿವೆ. ಉಳ್ಳಾಕುಲು ಕ್ಷೇತ್ರಕ್ಕೆ ಯಾತ್ರಿಗಳು ಬರುತ್ತಿದ್ದು, ಹೊಂಡಗಳಿಂದ ತುಂಬಿದ ರಸ್ತೆಯ ಮೂಲಕವೇ ತೆರಳುವಂತಾಗಿದೆ. ಈ ರಸ್ತೆ 30 ಮನೆಗಳಿಗೆ ಸಂಪರ್ಕವನ್ನೂ ಕಲ್ಪಿಸುತ್ತದೆ. ಸಂಬಂಧಪಟ್ಟ ಇಲಾಖೆ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಶಾಸಕರಿಗೆ ಮನವಿ
ಕುಂಬ್ರ-ಮಾಡ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೂ ಮನವಿ ಮಾಡಿ¨ªೆವು. ಆದರೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಶಾಸಕ ಸಂಜೀವ ಮಠಂದೂರು ಅವರಲ್ಲಿ ನಾವು ಮನವಿಯನ್ನು ಮಾಡಿದ್ದೇವೆ. ಡಾಮರು ಕಾಮಗಾರಿ ನಡೆಸುವ ಭರವಸೆಯನ್ನು ನೀಡಿದ್ದಾರೆ.
– ಮಹಮ್ಮದ್‌ ಎಸ್‌.ಎಂ. ಕುಂಬ್ರ , ಸ್ಥಳೀಯರು

 ಪ್ರಸ್ತಾವನೆ ಕಳುಹಿಸಿದ್ದೇವೆ
ರಸ್ತೆ ತೀರಾ ಹದಗೆಟ್ಟ ಕಡೆಗಳಲ್ಲಿ ಕಾಂಕ್ರೀಟ್‌ ಕಾಮಗಾರಿ ಮಾಡಲು ಶಾಸಕರ ಅನುದಾನದಲ್ಲಿ ಎಸ್ಸಿ-ಎಸ್ಟಿ ಕೋಟಾದಲ್ಲಿ 10 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ.
 - ರಾಧಾಕೃಷ್ಣ ಬೋರ್ಕರ್‌, ತಾ.ಪಂ. ಅಧ್ಯಕ್ಷರು

 ಚರಂಡಿ ಆಗಲಿ
ರಸ್ತೆಯು ಹದಗೆಟ್ಟಿದೆ. ಶಾಸಕರಲ್ಲಿ ಮನವಿ ಮಾಡಿ ರಸ್ತೆಯ ಡಾಮರು ಕಾಮಗಾರಿಗೆ ಅನುದಾನ ನೀಡುವಂತೆ ಕೇಳಿಕೊಳ್ಳಲಾಗುವುದು. ರಸ್ತೆ ಡಾಮರಿನ ಜತೆಗೆ ಚರಂಡಿ ಕಾಮಗಾರಿಯೂ ಆಗಬೇಕಿದೆ.
 - ವಿಶ್ವನಾಥ ಗೌಡ ಬೊಳ್ಳಾಡಿ , ಸ್ಥಳೀಯರು

– ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next