Advertisement

ಹದಗೆಟ್ಟ ಹೆದ್ದಾರಿ: ಪ್ರಯಾಣಿಕರ ಪ್ರಯಾಸ

02:41 PM Dec 18, 2019 | Suhan S |

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ವಿಶೇಷವಾಗಿ ಯಲ್ಲಾಪುರ ಮಾಗೋಡ ಕ್ರಾಸ್‌ನಿಂದ ಅರಬೈಲ್‌ ವರೆಗೆ ಮತ್ತು ಹೆಚ್ಚಿನದಾಗಿ ಘಟ್ಟ ಮತ್ತು ತಿರುವು ಪ್ರದೇಶದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಇದು ಹೆದ್ದಾರಿಯೋ ಅಥವಾ ಕಂದಕದೊಳಗೆ ಕಾಲುವೆಯೊಳಗೇ ದಾರಿಯೋ ಎನ್ನುವ ಸ್ಥಿತಿಯಾಗಿದ್ದು ಹೆದ್ದಾರಿ ಮೂಲಕ ಸಂಚಾರ ಸಂಚಕಾರ ತರುತ್ತಿದ್ದುದಲ್ಲದೇ ಓಡಾಡುವ ಜನತೆ ನಿತ್ಯ ಸಮಸ್ಯೆ ಎದುರಿಸುತ್ತ ಶಪಿಸುತ್ತ ಸಾಗಬೇಕಿದೆ.

Advertisement

ಹೆದ್ದಾರಿ 63ರ ಆರತಿಬೈಲ್‌ ಘಟ್ಟ ಪ್ರದೇಶದಲ್ಲಿ ಕಳೆದ ಜೂನ್‌ನಲ್ಲಿಯೇ ಹದಗೆಟ್ಟಿದೆ. ಮೇ ಕೊನೇ ಇಲ್ಲವೇ ಜೂನ್‌ ಪ್ರಾರಂಭದ ವೇಳೆಗೆ ಮರು ಡಾಂಬರೀಕರಣ ಮಾಡುತ್ತಾರೆ. ನಂತರ ಪ್ರಾರಂಭವಾಗುವ ಮಳೆಗೆ ತೊಳೆದು ಹೋಗುತ್ತದೆ. ಇದು ವರ್ಷದ ಮಾಮೂಲಿಯಾಗಿದೆ. ಒಂದೆರೆಡು ಕಡೆ ಇಲ್ಲಿ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಇಲ್ಲಿ ನಿತ್ಯವೂ ಅಪಘಾತಗಳು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಹೆದ್ದಾರಿ ಹದಗೆಟ್ಟು ಸಂಪೂರ್ಣ ಕೊರಕಲು ಬಿದ್ದಿದೆ. ಹಳ್ಳದಲ್ಲಿ ಸರ್ಕಸ್‌ ಮಾಡಿ ವಾಹನ ಚಲಾಯಿಸಿದ ಅನುಭವವಾಗುತ್ತದೆ.

ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ. ಸ್ವಲ್ಪ ಆಯ ತಪ್ಪಿದರೂ, ಅಪಾಯ ಗ್ಯಾರಂಟಿ. ಆದರೂ ಕನಿಷ್ಠ ನಿರ್ವಹಣೆ ಬಗೆಗೂ  ಹೆದ್ದಾರಿ ಇಲಾಖೆ ಮುತುವರ್ಜಿ ವಹಿಸದೇ ನಿರ್ಲಕ್ಷé ತಾಳಿದೆ. ಮಡಿದ ಕೆಲಸವನ್ನೂ ಕಳಪೆಯಾಗಿ ಮಡುವುದಲ್ಲದೇ ಸಕಾಲಕ್ಕೆ ಮಾಡದೇ ಕಾಟಾಚಾರಕ್ಕೆ ಕಳೆದ ಎಂಟತ್ತು ವರ್ಷಗಳಿಂದ ಮಾಡಿದಲ್ಲೇ ಕಾಮಗಾರಿ ಮಾಡುತ್ತಿದೆ.

ಹಾಳಾದ ಹೆದ್ದಾರಿ ಡಾಂಬರೀಕರಣ ಮಾಡಿ ದುರಸ್ತಿಪಡಿಸಲು ಅನುದಾನ ನೀಡುವಂತೆ ಹೆದ್ದಾರಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತಿದೆ. ಆದರೆ ಅದರ ಕಡತದ ಬಗ್ಗೆ ನಿಗಾವಹಿಸಿ ಲಾಬಿ ಮಾಡಿ ಈ ಜಿಲ್ಲೆಯ ಹೆದ್ದಾರಿ ನಿರ್ವಹಣೆಗೆ ಉತ್ತರ ಕನ್ನಡದ ಜನಪ್ರತಿನಿಧಿಗಳಿಂದ ಕೇಂದ್ರ ಮಟ್ಟದಲ್ಲಿ ಅನುದಾನ ತರುವಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು ಹಂಚಿಕೆ ಸಂದರ್ಭದಲ್ಲಿ ಬೇರೆ ಭಾಗದ ಜನಪ್ರತಿನಿಧಿಗಳು ಈ ತರಹದ ಅನುದಾನವನ್ನು ಸರಾಗವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಘಟ್ಟ ಪ್ರದೇಶದಲ್ಲಿ ಪ್ರತಿವರ್ಷ ರಸ್ತೆ ಹಾಳಾಗುತ್ತಿದ್ದು, ತೇಪೆ ಹಾಕುವ ಕಾರ್ಯ ಮಾಡಲಾಗುತ್ತದೆ. ಕಾಮಗಾರಿ ಕಳಪೆತನವೋ ಅಥವಾ ಇಳಿಜಾರಿನ ಪ್ರದೇಶದಲ್ಲಿ ವಾಹನಗಳ ಒತ್ತಡದಿಂದ ಹೀಗೆ ಆಗುತ್ತಿದೆಯೋ ಗೊತ್ತಿಲ್ಲ. ಆದರೆ ರಸ್ತೆ ಹಾಳಾಗಿ ಜನ, ವಾಹನಗಳು ಸಂಕಷ್ಟ ಪಡುವುದು ಮಾತ್ರ ತಪ್ಪುತ್ತಿಲ್ಲ. ಅರಬೈಲ್‌ದಿಂದ ಯಲ್ಲಾಪುರದವರೆಗೆ ಡಾಂಬರೀಕರಣ ಮಾಡಲು ಅನುದಾನಕ್ಕೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು.

 

Advertisement

-ನರಸಿಂಹ ಸಾತೊಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next