Advertisement

ಹದಗೆಟ್ಟಿದೆ ಬಸ್‌ ನಿಲ್ದಾಣ ಆವರಣ

04:14 PM May 13, 2019 | pallavi |

ಹನುಮಸಾಗರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ಕುಷ್ಟಗಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಎನಿಸಿಕೊಂಡಿರುವ ಹನುಮಸಾಗರ ಬಸ್‌ ನಿಲ್ದಾಣ ಶೌಚಾಲಯ , ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ , ಮೂಲಸೌಕರ್ಯದಿಂದ ವಂಚಿತವಾಗಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

Advertisement

ಹನುಮಸಾಗರ ಬಸ್‌ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಣಾಧಿಕಾರಿ ಇಲ್ಲದಿರುವುದು ಯಜಮಾನನಿಲ್ಲದ ಮನೆಯಂತಾಗಿದೆ. ಬೇರೆ ವಿಭಾಗದ ಬಸ್‌ಗಳು ನಿಲ್ದಾಣಕ್ಕೆ ಸರಿಯಾಗಿ ಬಾರದೇ ಸಾಕಷ್ಟು ತೊಂದರೆಯಾಗಿದೆ. ದೂರದ ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಂದರೇ ಪಾನ್‌ಶಾಪ್‌ ವ್ಯಾಪಾರಿಯೇ ವ್ಯಾಪಾರವನ್ನು ಬಿಟ್ಟು ಪ್ರಯಾಣಿಕರಿಗೆ ಬಸ್‌ ಯಾವಾಗ ಬರುತ್ತೇ? ಯಾವಾಗ ಹೋಗುತ್ತೆ ಎಂದು ಕಂಟ್ರೋಲರ್‌ ಆಗಿ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅನೈತಿಕ ಚಟುವಟಿಕೆ ತಾಣ: ವಿಶಾಲವಾದ ಬಸ್‌ ನಿಲ್ದಾಣದಲ್ಲಿ ಸಂಜೆಯಾದರೇ ನಿಲ್ದಾಣದಲ್ಲಿ ಮದ್ಯ ವ್ಯಸನಿಗಳ ಹಾಗೂ ಧೂಮ್ರಪಾನ ಮಾಡುವವರ ದಂಡೆ ಇರುತ್ತದೆ. ವ್ಯಸನಿಗಳ ಹಾವಳಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ರಾತ್ರಿ ವೇಳೆ ಆತಂಕದಲ್ಲೇ ಬಸ್‌ ನಿಲ್ದಾಣಕ್ಕೆ ಬರುವಂತ್ತಾಗಿದೆ. ಬಸ್‌ ನಿಲ್ದಾಣದ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದಿದ್ದಾರೆ.

ಬಯಲು ಶೌಚಾಲಯ: ಹನುಮಸಾಗರ ಬಸ್‌ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣವಾಗಿ 8-10 ವರ್ಷಗಳೆ ಕಳೆದರೂ ಯಾರಿಗೂ ಇಲ್ಲಿಯವರೆಗೂ ಟೆಂಡರ್‌ ನೀಡಿಲ್ಲ. ಸೂಕ್ತವಾದ ನಿರ್ವಹಣೆ ಇಲ್ಲದೇ ಶೌಚಾಲಯ ಕಾಲಿಡದಷ್ಟು ಗಲೀಜಾಗಿವೆ. ಕಿಡಿಗೇಡಿಗಳು ಶೌಚಾಲಯದ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಶೌಚಾಲಯ ಬಳಸದಂತ್ತಿರುವುದರಿಂದ ವಿಶಾಲವಾದ ಬಸ್‌ ನಿಲ್ದಾಣ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಅಲ್ಲದೇ ಬಸ್‌ ನಿಲ್ದಾಣ ಆವರಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದೂರದ ಪ್ರಯಾಣಿಕರು ಹನುಮಸಾಗರಕ್ಕೆ ಬಂದರೇ ಮೂಗು ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಈಶಾನ್ಯ ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಕುಷ್ಟಗಿ ಡಿಪೋ ಮ್ಯಾನೇಜರ್‌ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ತ್ಯಾಜ್ಯ ವಿಲೇವಾರಿ: ಬಸ್‌ ನಿಲ್ದಾಣಕ್ಕೆ ತ್ಯಾಜ್ಯ ವಿಲೇವಾರಿ ತಂದು ಸುರಿಯುತ್ತಿದ್ದು, ಇದು ಕಸದ ಬುಟ್ಟಿಯಾಗಿ ಮಾರ್ಪಟ್ಟರುವುದು ವಿಷಾದಕರ ಸಂಗತಿಯಾಗಿದೆ. ಗ್ರಾಮದ ಬಸ್‌ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಣಾಧಿಕಾರಿ ಇಲ್ಲದೇ ಇರುವುದರಿಂದ ನಿಲ್ದಾಣದಲ್ಲಿ ಕೇವಲ ಸರ್ಕಾರಿ ಸ್ವಾಮ್ಯದ ಬಸ್‌ಗಳು ಮಾತ್ರವಲ್ಲದೇ ಖಾಸಗಿ ವಾಹನಗಳು ಬಸ್‌ ನಿಲ್ದಾಣದ ಒಳಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಇದರಿಂದಾಗಿ ಸಾರಿಗೆ ಇಲಾಖೆಗೆ ಅಪಾರ ನಷ್ಟವಾಗುತ್ತಿದ್ದು, ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

Advertisement

ಪ್ರಾರಂಭವಾಗದ ಕ್ಯಾಂಟೀನ್‌: ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ಕಟ್ಟಡವಿದ್ದರೂ ಯಾರು ಬರದೇ ಇರುವುದರಿಂದಾಗಿ ಕ್ಯಾಂಟೀನ್‌ಗೆ ಬೀಗ ಹಾಕಲಾಗಿದೆ. ಬಿರು ಬಿಸಿಲಿನಿಂದ ಬರುವ ಪ್ರಯಾಣಿಕರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಬಸ್‌ ನಿಲ್ದಾಣದ ಆವರಣದಲ್ಲಿ ನೆಟ್ಟ ಸಸಿಗಳು ಸೂಕ್ತ ನಿರ್ವಹಣೆಯಿಲ್ಲದೇ ಒಣಗಿವೆ. ಕೂಡಲೇ ಕುಷ್ಟಗಿ ಡಿಪೋ ಮ್ಯಾನೇಜರ ಕೂಡಲೆ ಎಚ್ಚೆತ್ತುಕೊಂಡು ಹನುಮಸಾಗರ ಬಸ್‌ ನಿಲ್ದಾಣಕ್ಕೆ ಖಾಯಂ ಸಂಚಾರಿ ನಿಯಂತ್ರಣಾಕಾರಿಯನ್ನು ನೇಮಿಸಬೇಕು , ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕು. ಬಸ್‌ ನಿಲ್ದಾಣ ಸುತ್ತಲೂ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಸಂಚಾರಿ ನಿಯಂತ್ರಕರು ಇಲ್ಲದಿರುವುದರಿಂದ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಸ್‌ ನಿಲ್ದಾಣದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಶೌಚಾಲಯ ನಿರ್ಮಿಸಿದ್ದರೂ ಅದು ಬಳಕೆಗೆ ಲಭ್ಯವಿಲ್ಲ. ಇದರಿಂದಾಗಿ ದೂರದ ಪ್ರಯಾಣಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

•ವೆಂಕಟೇಶ ಹೊಸಮನಿ, ಸ್ಥಳೀಯ

ಹನುಮಸಾಗರ ಬಸ್‌ ನಿಲ್ದಾಣದಲ್ಲಿ ಈಗಾಗಲೇ ಸಂಚಾರಿ ನಿಯಂತ್ರಿಕರಿದ್ದು, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು.

•ಸಂತೋಷ, ಕುಷ್ಟಗಿ ಡಿಪೋ ಮ್ಯಾನೇಜರ್‌

ಕೆಲ ತಿಂಗಳ ಹಿಂದೆ ಸ್ನೇಹಿತರೆಲ್ಲ ಸೇರಿ ಬಸ್‌ ನಿಲ್ದಾಣದ ಸುತ್ತಮುತ್ತಲು ಶ್ರಮದಾನ ಮಾಡಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದೇವು. ಮದ್ಯವ್ಯಸನಿಗಳ ಹಾವಳಿಯಿಂದಾಗಿ ಬಸ್‌ ನಿಲ್ದಾಣದ ವಾತಾವರಣ ಕಲುಷಿತಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

•ರಾಘವೇಂದ್ರ ಈಳಗೇರ, ಸ್ಥಳೀಯ

•ವಸಂತಕುಮಾರ ವಿ ಸಿನ್ನೂರ

Advertisement

Udayavani is now on Telegram. Click here to join our channel and stay updated with the latest news.

Next