Advertisement

ಗೂಂಡಾ ಕಾಯ್ದೆಯಡಿ ಬಂಧನ: ಹೈಕೋರ್ಟ್‌ನಿಂದ ಮಾರ್ಗಸೂಚಿ

06:29 AM Mar 19, 2019 | |

ಬೆಂಗಳೂರು: ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸುವ ವಿಚಾರದಲ್ಲಿ ಪೊಲೀಸ್‌ ಇಲಾಖೆ ಮಾಡುತ್ತಿರುವ ಕಾನೂನು ಲೋಪಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಈ ಸಂಬಂಧ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ಯಾರಾನ್ನಾದರೂ ಗೂಂಡಾ ಕಾಯ್ದೆಯಡಿ ಬಂಧಿಸುವ ಮೊದಲು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ.

Advertisement

ತುಮಕೂರು ಮೂಲದ ರವಿ ಕುಮಾರ್‌ ಎಂಬುವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್‌.ಫ‌ಣೀಂದ್ರ ಮತ್ತು ನ್ಯಾ. ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಾರ್ಗಸೂಚಿಗಳನ್ನು ರಚಿಸಿ ಆದೇಶ ಮಾಡಿದೆ.

ಅಲ್ಲದೆ, ಈ ಆದೇಶ ಪ್ರತಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಗಳಿಗೆ ಕಳುಹಿಸಲು ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಆದೇಶಿಸಿದೆ.

ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗುವ ಬಹುತೇಕ ಜನರಿಗೆ ತಾವು ಏಕೆ ಬಂಧನಕ್ಕೆ ಒಳಗಾಗಿದ್ದೇವೆ, ಅದಕ್ಕೆ ಕಾರಣಗಳೇನು ಎಂಬುದೇ ತಿಳಿದಿರುವುದಿಲ್ಲ. ಅಲ್ಲದೆ, ಅಲ್ಪ ಸ್ವಲ್ಪ ಕಾನೂನು ತಿಳಿದಿದ್ದವರಿಗೂ ಅರ್ಥವಾಗದಂತೆ ಬಂಧನದ ಆದೇಶಗಳನ್ನು ಹೊರಡಿಸಲಾಗುತ್ತದೆ. ಹಾಗಾಗಿ ಈ ಮಾರ್ಗಸೂಚಿಯನ್ನು ಹೊರಡಿಸುತ್ತಿರುವುದಾಗಿ ಹೇಳಿರುವ ನ್ಯಾಯಪೀಠ ಬಂಧನ ಆದೇಶ ಲಿಖೀತ ರೂಪದಲ್ಲಿರಬೇಕು,

ಬಂಧನಕ್ಕೂ ಮೊದಲು ಆ ವ್ಯಕ್ತಿಗೆ ಆದೇಶ ತಲುಪಿರಬೇಕು, ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ ಎಂಬುದಕ್ಕೆ ಕಾರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೀಡಬೇಕು ಎಂದೂ ನ್ಯಾಯಪೀಠ ಹೇಳಿದೆ. ಸಂಬಂಧಪಟ್ಟ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಆಧಾರಗಳನ್ನು ಮುಂದಿಟ್ಟುಕೊಂಡು ಬಂಧನ ಆದೇಶ ಹೊರಡಿಸಿದರೆ, ಅಂತಹ ಸಂದರ್ಭದಲ್ಲಿ ಎಲ್ಲಾ ಕಾರಣಗಳನ್ನು ಪ್ರತ್ಯೇಕವಾಗಿ ಉಲ್ಲೇಖೀಸಬೇಕು. ಆದೇಶದ ಪ್ರತಿಯನ್ನು ಬಂಧಿಸ‌ಲ್ಪಡುವವರಿಗೆ ಅರ್ಥವಾಗುವ ಭಾಷೆಯಲ್ಲಿ ಅನುವಾದಿಸಿ ತಲುಪಿಸಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

Advertisement

ಹೈಕೋರ್ಟ್‌ ರೂಪಿಸಿದ ಮಾರ್ಗಸೂಚಿಗಳು
– ಬಂಧನ ಆದೇಶವನ್ನು ಲಿಖೀತ ರೂಪದಲ್ಲಿ ಹೊರಡಿಸಿದ ಕೂಡಲೇ ಅದನ್ನು 5 ದಿನಗಳೊಳಗೆ ಬಂಧಿತನಿಗೆ ಒದಗಿಸಬೇಕು. 

– ಬಂಧನ ಆದೇಶ ಹೊರಡಿಸಲು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಾರಣಗಳು ಇದ್ದಲ್ಲಿ, ಅದನ್ನು ಪ್ರತ್ಯೇಕವಾಗಿ ಉಲ್ಲೇಖೀಸಬೇಕು.

– ಬಂಧನ ಆದೇಶ, ಅದಕ್ಕೆ ಪೂರಕವಾದ ದಾಖಲೆಗಳನ್ನು ಬಂಧಿತನು ತಿಳಿದಿರುವ ಭಾಷೆಗೆ ಅನುವಾದಿಸಿ  ಒದಗಿಸಬೇಕು.

– ಬಂಧಿತನ ಜಾಮೀನು ಅರ್ಜಿ, ಆ ಕುರಿತು ಕೋರ್ಟ್‌ ಆದೇಶ, ಜಾಮೀನು ಷರತ್ತು ಉಲ್ಲಂಘಿಸಿದ ಸಂದರ್ಭದಲ್ಲಿ, ಆ ಕುರಿತ ಆದೇಶಗಳನ್ನು ನ್ಯಾಯಾಲಯ ಹಾಗೂ ಬಂಧನ ಪ್ರಾಧಿಕಾರ ಕೂಲಂಕುಶವಾಗಿ ಪರಿಶೀಲಿಸಬೇಕು.

– ಬಂಧನ ಆದೇಶ ಪ್ರಶ್ನಿಸಿದ ವೇಳೆ ಪ್ರತಿಯೊಂದು ಕಾರಣವನ್ನು ನ್ಯಾಯಾಲಯವು ಸ್ವತಂತ್ರವಾಗಿ ಪರಿಗಣಿಸಬೇಕು ಹಾಗೂ ಬಂಧನ ಆದೇಶವು ಈಗ ರೂಪಿಸಲಾಗಿರುವ ಮಾರ್ಗಸೂಚಿಗಳ ಅನುಗುಣವಾಗಿದೆಯೇ ಎಂಬುದರ ಕುರಿತು ಪರಿಶೀಲಿಸಬೇಕು. 

– ಬಂಧನ ಆದೇಶದ ಕುರಿತು ಬಂಧಿತನು ಯಾವುದೇ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಸಲಹಾ ಮಂಡಳಿ, ಸರ್ಕಾರ, ಬಂಧನ ಪ್ರಾಧಿಕಾರವು ತಕ್ಷಣವೇ ಪರಿಗಣಿಸಬೇಕು.

– ಬಂಧನದ ಆದೇಶ ಹೊರಡಿಸಿದ ಮೂರು ವಾರಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಕಾರಣ, ಬಂಧಿತನ ಮನವಿಪತ್ರಗಳನ್ನು ಸಲಹಾ ಮಂಡಳಿಯ ಮುಂದೆ ಸರ್ಕಾರ ಒದಗಿಸಬೇಕು. 

– ಸಲಹಾ ಮಂಡಳಿಯು ಎಲ್ಲಾ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಬಂಧನ ಆದೇಶದ ಕುರಿತು ಪರಿಶೀಲನೆ ನಡೆಸಿ ಏಳು ವಾರಗಳಲ್ಲಿ ಸರ್ಕಾರಕ್ಕೆ ವರದಿ ಕಳುಹಿಸಬೇಕು. 

– ಸಲಹಾ ಮಂಡಳಿ ವರದಿ ಸಲ್ಲಿಸಿದ ನಂತರ ಬಂಧಿನತ ಮನವಿ ಪತ್ರ ಸಲ್ಲಿಸಿದರೆ, ಸರ್ಕಾರವು ಅದನ್ನು ಬಂಧನ ಆದೇಶ ಕಾಯಂಗೊಳಿಸುವ ಮುನ್ನ ಪರಿಗಣಿಸಬೇಕು.

– ಯಾವುದೇ ಮನವಿಯನ್ನಾದರೂ ಬಂಧನ ಆದೇಶ ಅಂತಿಮಗೊಳಿಸುವ ಮುನ್ನವೇ ಪರಿಗಣಿಸಬೇಕು. ಅಂತಿಮ ಆದೇಶ ಹೊರಬಿದ್ದ ನಂತರ ಮನವಿ ಪರಿಗಣಿಸುವಂತಿಲ್ಲ. 

– ಬಂಧನ ಮಾಡಲು ಯಾವುದೇ ಸಕಾರಣ ಇಲ್ಲ ಎಂದು ಸಲಹಾ ಮಂಡಳಿ ವರದಿ ನೀಡಿದರೆ, ಅದನ್ನು ಪರಿಗಣಿಸಿ ಕೂಡಲೇ ಬಂಧಿತನನ್ನು ಬಿಡುಗಡೆ ಮಾಡಬೇಕು.

– ಸಲಹಾ ಮಂಡಳಿ ನೀಡಿದ ವರದಿ ಆಧರಿಸಿ ಬಂಧನದಿಂದ ವ್ಯಕ್ತಿಯನ್ನು ಬಿಡುಗಡೆ ಮಾಡಿದ ನಂತರ, ಅದೇ ಕಾರಣದಿಂದ ಮತ್ತೆ ಆತನನ್ನು ಬಂಧಿಸಲು ಅಥವಾ ಬಂಧನದ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಒಂದೊಮ್ಮೆ ಬಂಧಿಸಬೇಕಾದರೆ ಹೊಸ ಕಾರಣಗಳ ಮೇಲೆ ಪ್ರತ್ಯೇಕ ಅಥವಾ ಹೊಸ ಆದೇಶ ಹೊರಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next