ಬೆಂಗಳೂರು: ಎರಡು ದಿನಗಳ ಕಾಲ ರಾಜ್ಯದ 15 ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಗುರುವಾರ ಕಲಬುರಗಿ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಎಸ್.ಎಂ. ಬಿರಾದಾರ ಮತ್ತು ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರನ್ನು ಬಂಧಿಸಿದ್ದಾರೆ.
ಎಲ್ಲ 15 ಆರೋಪಿಗಳು ಆದಾಯಕ್ಕಿಂತ ನೂರಾರು ಪಟ್ಟು ಅಧಿಕ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಬುಧವಾರ ಮತ್ತು ಗುರುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕಲಬುರಗಿ, ಮಂಡ್ಯ, ಬಳ್ಳಾರಿ, ಬೆಳಗಾವಿ ಸಹಿತ 68 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಆರೋಪಿತ ಎಲ್ಲ ಅಧಿಕಾರಿಗಳ ಬ್ಯಾಂಕ್ ಲಾಕರ್‌ಗಳನ್ನೂ ಪರಿಶೀಲಿಸಲಾಗಿದೆ. ಆದರೆ ಯಾವುದೇ ದಾಖಲೆಗಳು, ಇತರ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.
ನೋಟಿಸ್ ಜಾರಿ:
ಆರೋಪಿತ 15 ಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಿಚಾರಣೆಗೆ ಬರುವಾಗ ವೃತ್ತಿ ಆರಂಭಿಸಿದ ದಿನಗಳಿಂದ ಇದುವರೆಗೆ ಪಡೆದಿರುವ ವೇತನದ ರಸೀದಿ, ಖರ್ಚು ವೆಚ್ಚದ ರಸೀದಿಗಳ ಸಹಿತ ಎಲ್ಲ ದಾಖಲೆಗಳನ್ನು ತರಬೇಕು, ಯಾವ ಮೂಲಗಳಿಂದ ಈ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಾಕರ್ ಖಾಲಿ ಮಾಡಿದ ಭ್ರಷ್ಟರು : ಬುಧವಾರ ಎಲ್ಲ ಭ್ರಷ್ಟ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳನ್ನು ಶೋಧಿಸಿದ್ದ ಎಸಿಬಿ ಅಧಿಕಾರಿಗಳು ಗುರುವಾರ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳು ಮತ್ತು ಲಾಕರ್‌ಗಳನ್ನು ಜಾಲಾಡಿದ್ದಾರೆ. ಆದರೆ ಯಾವುದೇ ವಸ್ತುಗಳು ಮತ್ತು ದಾಖಲೆಗಳು ಸಿಕ್ಕಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇತ್ತೀಚೆಗೆ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಆರೋಪಿತ ಅಧಿಕಾರಿಗಳು ತಮ್ಮ ಲಾಕರ್‌ಗಳನ್ನು ಖಾಲಿ ಮಾಡಿರುವ ಮಾಹಿತಿ ಸಿಕ್ಕಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಬ್ಯಾಂಕ್‌ಗಳಿಂದ ಪಡೆಯಲಾಗುತ್ತದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.