ಬೆಳಗಾವಿ: ಅಕಾಡೆಮಿಯೊಂದಕ್ಕೆ ಹೋಗಿ ತಾವು ಜಿಎಸ್ ಟಿ ಅಧಿಕಾರಿಗಳು ಎಂದು ಹೇಳಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
ಅಶೋಕ ಪರಶುರಾಮ ಸಾವಂತ ಹಾಗೂ ಜಯವಂತ ಬಾಡಿವಾಲೆ ಎಂಬಾತರನ್ನು ಬಂಧಿಸಲಾಗಿದ್ದು, ಇನ್ನೋರ್ವ ಮಹೇಶ ಪಾಟೀಲ ಪರಾರಿಯಾಗಿದ್ದಾನೆ.
ಗೋವಾವೇಸ್ ವೃತ್ತದಲ್ಲಿ ಇರುವ ಡ್ರೀಮ್ ಫ್ಲೈ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿಗೆ ಹೋದ ಈ ಮೂವರು ತಾವು ಜಿಎಸ್‍ಟಿ ಅಧಿಕಾರಿಗಳು ಎಂದು ನಂಬಿಸಿದ್ದಾರೆ. ಜಿಎಸ್ ಟಿ ತುಂಬಿಲಲ್ಲ ಹೀಗಾಗಿ ಕಚೇರಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ 25 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ.
ಅಶೋಕ ಸಾವಂತ ಎಂಬಾತ ಕೇಂದ್ರ ಅಬಕಾರಿ ಇಲಾಖೆಯಲ್ಲಿ ಜಿಎಸ್‍ಟಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದನು. ಮಹೇಶ ಪಾಟೀಲ ಮರಾಠಿ ದಿನಪತ್ರಿಕೆ ವರದಿಗಾರ ಎಂಬುದು ಇವರ ಗುರುತಿನ ಚೀಟಿ ಪರಿಶೀಲಿಸಿದಾಗ ಗೊತ್ತಾಗಿದೆ. ಅಕಾಡೆಮಿ ಮಾಲೀಕ ತಿರುಮಲ ವಿಂಜುಮರ್ ಸುದರ್ಶನ್ ಶಹಾಪುರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಶಹಾಪುರ ಪೊಲೀಸ್ ಠಾಣೆ ಸಿಪಿಐ ಜಾವೇದ ಮುಶಾಪುರೆ ಅವರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಹಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.