ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿಸುವಂತೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ನಯನ್ ಜೈ ಕಿಷನ್ ತಿಲ್‌ವಾನಿ(30) ಬಂಧಿತ. ಆರೋಪಿಯಿಂದ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಮುಂಬೈನಲ್ಲಿ ಸಂತ್ರಸ್ತೆ ಜತೆ ಕೆಲಸ ಮಾಡುತ್ತಿದ್ದ ಆರೋಪಿ ಆಕೆಯ ಮೊಬೈಲ್ ನಂಬರ್ ಪಡೆದು ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಕತ್ತಾ ಮೂಲದ ಸಂತ್ರಸ್ತೆ ಈ ಹಿಂದೆ ಮುಂಬೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಆರೋಪಿಯ ಪರಿಚಯವಾಗಿತ್ತು. ಬಳಿಕ ಬೆಂಗಳೂರಿಗೆ ಬಂದ ಮಹಿಳೆಯನ್ನು ಆರೋಪಿ ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡು ಆಕೆಯ ಹೊಸ ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ.
ಬಳಿಕ ಆಕೆಗೆ ಕರೆ ಮಾಡಿ ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಇದಕ್ಕೆ ನಿರಾಕರಿಸಿದ ಸಂತ್ರಸ್ತೆ ಆರೋಪಿಯ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಆದರೂ, ಆರೋಪಿ ನಾನಾ ನಂಬರ್‌ಗಳಿಂದ ಕರೆ ಮಾಡಿ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದು, ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಕೊಲೆಗೈಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಅಲ್ಲದೆ, ಸಂತ್ರಸ್ತೆಯ ಮನೆಯವರ ನಂಬರ್‌ಗಳನ್ನು ಸಂಗ್ರಹಿಸಿದ ತಿಲ್‌ವಾನಿ, ನಿಮ್ಮ ಮಗಳಿಗೆ ನನ್ನನ್ನು ಪ್ರೀತಿಸುವಂತೆ ಹೇಳಿ ಇಲ್ಲವಾದರೆ ಎಲ್ಲರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಜತೆಗೆ ಸಂತ್ರಸ್ತೆಯ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪೊಪ್ಪಿಕೊಂಡ ಆರೋಪಿ: ಆರೋಪಿ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದು, ಆಕೆಯೊಂದಿಗೆ ಸದಾ ಇರಲು ಬಯಸಿದ್ದೆ. ಆದರೆ, ಆಕೆ ನಿರಾಕರಿಸಿದಳು. ಹೀಗಾಗಿ ಆ್ಯಪ್‌ವೊಂದರಿಂದ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದೆ. ಆದರೆ, ಆಕೆ ನನ್ನ ಧ್ವನಿ ಕೇಳುತ್ತಿದ್ದಂತೆ ಕರೆ ಸ್ಥಗಿತಗೊಳಿಸುತ್ತಿದ್ದಳು. ಹೀಗಾಗಿ ಆಕೆಯ ಮನೆಯವರ ನಂಬರ್ ಪಡೆದು ಕರೆ ಮಾಡುತ್ತಿದ್ದೆ ಎಂದು ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದರು.