Advertisement

ಮೋಜಿಗಾಗಿ ಸರಗಳವು ಮಾಡುತ್ತಿದ್ದವನ ಬಂಧನ

12:13 PM Apr 18, 2018 | Team Udayavani |

ಬೆಂಗಳೂರು: ಮೋಜು-ಮಸ್ತಿಗಾಗಿ ಹಣ ಸಂಪಾದಿಸಲು ಒಂಟಿ ಮಹಿಳೆಯರ ಸರ ಕಳವು ಮಾಡುತ್ತಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರ ನಿವಾಸಿ ಸುಹೇಲ್‌ ಪಾಷಾ (23) ಬಂಧಿತ.

Advertisement

ಐಷಾರಾಮಿ ಜೀವನ ನಡೆಸುವ ಬಯಕೆ ಹೊಂದಿದ್ದ ಸುಹೇಲ್‌ ಪಾಷಾ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ. ನಂತರ ಅವುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 326 ಗ್ರಾಂ ತೂಕದ 9 ಸರಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ ಶರಣಪ್ಪ ತಿಳಿಸಿದ್ದಾರೆ.

ಸರ ಕಳವು ಮಾಡಿ ಜೈಲು ಸೇರುತ್ತಿದ್ದ ಸುಹೇಲ್‌ ಪಾಷಾ, ಬಿಡುಗಡೆಯಾಗಿ ಬರುತ್ತಿದ್ದಂತೆ ತನ್ನ ಸ್ನೇಹಿತ ಇಮ್ರಾನ್‌ ಜತೆ ಸೇರಿ ಮತ್ತೆ ಸರಗಳ್ಳತನಕ್ಕೆ ಇಳಿಯುತ್ತಿದ್ದ. ಬಾಡಿಗೆ ಆಟೋ ಓಡಿಸುವ ನೆಪದಲ್ಲಿ ಜನಸಂದಣಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುತ್ತಾಡಿ ಒಂಟಿ ಮಹಿಳೆಯರ ಮನೆ ಹಾಗೂ ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ.

ಕೆಲವೊಮ್ಮೆ ಬೈಕ್‌ನಲ್ಲಿ ಬರುತ್ತಿದ್ದ ಆರೋಪಿಗಳು, ಒಂಟಿ ಮಹಿಳೆಯರ ಗಮನ ಬೇರೆಡೆ ಸೆಳೆದು ಸರ ಕಳವು ಮಾಡಿ ಪರಾರಿಯಾಗುತ್ತಿದ್ದರು. ಇತ್ತೀಚೆಗೆ ದಕ್ಷಿಣ ವಿಭಾಗದಲ್ಲಿ ಸರಗಳ್ಳತನ ಹೆಚ್ಚಾಗಿದ್ದರಿಂದ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಲೆಮರೆಸಿಕೊಂಡಿರುವ ಇಮ್ರಾನ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಡಿಸಿಪಿ ಶರಣಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next