Advertisement

ಬಸ್‌ ಚಾಲಕನ ಕೊಲೆ ಆರೋಪಿಗಳ ಬಂಧನ

09:46 AM Jul 20, 2017 | Team Udayavani |

ದಾವಣಗೆರೆ: ಅನೈತಿಕ ಸಂಬಂಧದ ಜಗಳದಲ್ಲಿ ನಡೆದಿದ್ದ ಖಾಸಗಿ ಬಸ್‌ ಚಾಲಕನ ಕೊಲೆ ಘಟನೆ ಬೇಧಿಸಿರುವ ಚನ್ನಗಿರಿ ಪೊಲೀಸರು,
ಪ್ರಕಟಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.

Advertisement

ಚನ್ನಗಿರಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ಬಸ್‌ ಚಾಲಕ ಸಿದ್ದೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟಕಡೂರು
ಗ್ರಾಮದ ಮಂಜುನಾಥ್‌ (34), ಶ್ರುತಿ (27) ಹಾಗೂ ಶವ ಸಾಗಿಸಲು ನೆರವಾಗಿದ್ದ ಗೋವಿಂದಪ್ಪ (38) ನನ್ನು ಬಂಧಿಸಲಾಗಿದೆ.
ಮೂಲತಃ ಮಲ್ಲಿಗೇನಹಳ್ಳಿ ಗ್ರಾಮದ ಸಿದ್ದೇಶ್‌ ಬೆಟ್ಟಕಡೂರು ಗ್ರಾಮದ ಶ್ರುತಿಯೊಂದಿಗೆ ಮೂರು ವರ್ಷದಿಂದ ಅನೈತಿಕ
ಸಂಬಂಧ ಹೊಂದಿದ್ದ. ಈ ನಡುವೆ ಕಳೆದ ಎರಡು ತಿಂಗಳನಿಂದ ಶ್ರುತಿ ಬೆಟ್ಟದಕಡೂರು ಗ್ರಾಮದ ಮಂಜುನಾಥನೊಂದಿಗೆ ಸಹ
ಸಂಬಂಧ ಹೊಂದಿದ್ಧಳು. 

ಈ ವಿಷಯ ತಿಳಿದ ಸಿದ್ದೇಶ್‌ ಕುಪಿತಗೊಂಡಿದ್ದ. ಅನೇಕ ಬಾರಿ ಆಕೆಯೊಂದಿಗೆ ಜಗಳವಾಡಿದ್ದನು. ಕೊಲೆಗೀಡಾಗುವ ದಿನ (ಜು.14)
ರಂದು ರಾತ್ರಿ ಆತ ಶ್ರುತಿಯ ಮನೆಗೆ ಹೋಗಿದ್ದ. ಅದೇ ಸಮಯಕ್ಕೆ ಮಂಜುನಾಥ ಸಹ ಬಂದಾಗ ಅವರಿಬ್ಬರ ನಡುವೆ ಗಲಾಟೆ ನಡೆದಿದೆ. ಒಂದು ಹಂತದಲ್ಲಿ ಮಂಜುನಾಥ್‌ ಹನಿ ನೀರಾವರಿಗೆ ಅಳವಡಿಸುವ ಡ್ರಿಪ್‌ ವೈರ್‌ನಿಂದ ಸಿದ್ದೇಶ್‌ನ ಕುತ್ತಿಗೆಗೆ ಹಾಕಿ ಕೊಲೆ ಮಾಡಿದ್ದಾನೆ. ಶ್ರುತಿ ಮತ್ತು ಮಂಜುನಾಥ್‌ ಸಿದ್ದೇಶ್‌ನ ಶವವನ್ನು ಮನೆಯ ಹಿಂಭಾಗದಲ್ಲೇ ಇರುವ ತೋಟದಲ್ಲಿ ಇಟ್ಟಿದ್ದರು.

ತಡರಾತ್ರಿಯಲ್ಲಿ ಮಂಜುನಾಥ ತನ್ನ ಸ್ನೇಹಿತ ಬೆಟ್ಟದಕಡೂರಿನ ಗೋವಿಂದಪ್ಪನನ್ನು ಕರೆಸಿಕೊಂಡು, ಮೂವರು ಸೇರಿಕೊಂಡು ಶವವನ್ನು ಗ್ರಾಮದ ಹೊರ ವಲಯದ ಅಡಕೆ ತೋಟದಲ್ಲಿ ಎಸೆದು ಬಂದಿದ್ದರು. ಜು. 15 ರಂದು ಬೆಟ್ಟಕಡೂರು ಗ್ರಾಮದ ಹೊರ ವಲಯದ ಅಡಕೆ ತೋಟದಲ್ಲಿ ಖಾಸಗಿ ಬಸ್‌ ಚಾಲಕ ಸಿದ್ದೇಶ್‌ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕೊಲೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಗಿರಿ ಪೊಲೀಸರು, ಪ್ರಕರಣ ಭೇದಿಸಿ, ಮಂಗಳವಾರ ಮೂವರನ್ನು
ಬಂಧಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆ ಪ್ರಕರಣದ ಆರೋಪಿ ಶ್ರುತಿಗೆ 5 ಮತ್ತು 2 ವರ್ಷದ ಇಬ್ಬರು ಮಕ್ಕಳಿದ್ದಾರೆ. ಕೊಲೆ ಪ್ರಕರಣಕ್ಕೂ ಶ್ರುತಿಯ ಪತಿ
ಹನುಮಂತಪ್ಪನಿಗೆ ಯಾವುದೇ ಸಂಬಂಧವೇ ಇಲ್ಲ. ಕೊಲೆ ನಡೆದ ದಿನ ಹನುಮಂತಪ್ಪ ಮನೆಯಲ್ಲಿ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು.

ಕೊಲೆ ಪ್ರಕರಣ ಭೇದಿಸಿದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ, ಗ್ರಾಮಾಂತರ ಉಪ ವಿಭಾಗ
ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌, ಚನ್ನಗಿರಿ ವೃತ್ತ ನಿರೀಕ್ಷಕ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ವೀರಬಸಪ್ಪ ಕುಸಲಾಪುರ,
ಸಿಬ್ಬಂದಿಗಳಾದ ರಾಮಚಂದ್ರ ಆರ್‌. ಜಾಧವ್‌, ರಮೇಶ್‌, ಬಿ.ಎಸ್‌. ರೂಪ್ಲಿಬಾಯಿ, ಹೊನ್ನೂರುಸಾಬ್‌, ಹನುಮಂತ ಕವಾಡಿ, ಶೋಭಾ, ಪದ್ಮಾವತಿ, ಎಸ್‌.ಆರ್‌. ರುದ್ರೇಶ್‌, ರವಿ ದಾದಾಪುರ, ರವೀಂದ್ರ, ಗುರುನಾಯ್ಕ, ರಘು, ರೇವಣ್ಣ, ಪರಮೇಶ್‌ನಾಯ್ಕ ಅವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

Advertisement

ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ, ಗ್ರಾಮಾಂತರ ಉಪ ವಿಭಾಗ ಉಪಾಧೀಕ್ಷಕ ಮಂಜುನಾಥ್‌ ಕೆ.
ಗಂಗಲ್‌, ಚನ್ನಗಿರಿ ವೃತ್ತ ನಿರೀಕ್ಷಕ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ವೀರಬಸಪ್ಪ ಕುಸಲಾಪುರ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next